Sunday, January 4, 2015

ಪದಗಳ ಜಾಡು ಹಿಡಿದು... (ಪದ ಕಮ್ಮಟ ೨೦೧೫)

ಭಾಷೆ ಎಂಬುದು ಸಂಸ್ಕೃತಿ. ಸಂಸ್ಕೃತಿಯ ದನಿ ಈ ಪದ. 
ಪದ ಎಂಬುದು ಅರ್ಥವುಳ್ಳ ಧ್ವನಿ. ಪದಗಳಿಂದ ಸಾಲು, ಸಾಲುಗಳಿಂದ ಪದ್ಯ. ಪದಗಳಿಂದ ವಾಕ್ಯ, ವಾಕ್ಯಗಳಿಂದ ಗದ್ಯ ( ಪದ್ಯವಲ್ಲದ್ದು - ಲೇಖನ, ಪಾಠ, ಕಥೆ, ಪ್ರಬಂಧ, ಕಾದಂಬರಿ....). ಪದ ಎಂದರೆ ಹಾಡೂ/ಕವಿತೆಯೂ ಆಗಬಹುದು (ರತ್ನನ್ ಪದಗಳು) . ಪದ ಪದ ಕನ್ನಡ್ ಪದಾನೆ... ನಾ.. ರತ್ನನ್ ಪದ ಕೇಳ್ಕೊಂಡ್ ಬೆಳೆದೋನೆ... 

ಪದಗಳು ಕಾಲಾತೀತವೇ ? ಒಂದು ಪದಕ್ಕೆ ಒಂದು ಭಾಷೆಯಲ್ಲಿ ಮೊದಲಿನಿಂದಲೂ ಒಂದೇ ಅರ್ಥ ಇರುತ್ತದೆಯೇ? ಬದಲಾಗುವ ಸಾದ್ಯತೆಯಂತೂ ಇದೆ. ('ಅಗ್ಗ' ಪದದ ಅರ್ಥ ಹಳಗನ್ನಡ ಕಾಲದಲ್ಲಿ ಶ್ರೇಷ್ಠ, ಹೊಸಗನ್ನಡದಲ್ಲಿ ಅದಕ್ಕೆ ವಿರುದ್ದವಾದ ಅರ್ಥದಲ್ಲಿ ಬಳಕೆಯಾಗುತ್ತಿದೆ) ಕಾಲಾಯ ತಸ್ಮೈ ನಮಃ. ಕಾಲ ಬದಲಾದಂತೆ ಭಾಷೆಗೆ ಹಲವು ಪದಗಳು ಸೇರಿಕೊಳ್ಳಬಹುದು, ಅಂತೆಯೇ ಹಲವು ಪದಗಳು ಬಳಕೆಗೊಳ್ಳದೆ ನರಳಲೂಬಹುದು. ಭಾಷೆಯ ಬೆಳವಣಿಗೆ ಕಾಲಕ್ಕೆ ತಕ್ಕಂತೆ ಹೊಂದಿಕೊಂಡೇ ಹೋಗಬೇಕಾಗಿರುವ ಅನಿವಾರ್ಯ ಎಲ್ಲ ಭಾಷೆಗಳಿಗೂ ಇದೆ. ಹೊಂದಿಕೊಳ್ಳುವ ಗುಣವಿರುವ ಭಾಷೆಗಳು ಉಳಿಯುತ್ತವೆ, ಇಲ್ಲಾ ಕ್ರಮೇಣ ನಶಿಸುತ್ತವೆ. ಭಾಷೆಯ ನಾಶ ಎಂಬುದು ಸಂಸ್ಕೃತಿಯ ನಾಶವೂ ಹೌದು. 

ಹೊಸ ಹೊಸ ಪದಗಳ ಅವಶ್ಯಕತೆ ಬಂದಾಗ ಜನರು/ಪ್ರಾಜ್ಞರು/ತಜ್ಞರು ಒಂದು ಪದವನ್ನು ತರುತ್ತಾರೆ; ಅದು ಮೂಲ ಭಾಷೆಯ ಪದಗಳ ಸಂಕರವಾಗಿರಬಹುದು, ಬೇರೆ ಭಾಷೆಯ ಪದಾನುವಾದವೋ, ಭಾವಾನುವಾದವೋ ಅಥವಾ ಬೇರೆ ಭಾಷೆಯ ಪದವನ್ನೇ ನಮ್ಮ ಭಾಷೆಗೆ ಒಗ್ಗಿಸಿಕೊಳ್ಳುವುದೋ ಆಗಿರಬಹುದು. ಆ ಪದವನ್ನು ಎಲ್ಲರೂ ಬಳಸಿದಾಗ ಮಾತ್ರ ಆ ಪದಕ್ಕೆ ಆಯಸ್ಸು. ಈ ರೀತಿಯ ಕಾರ್ಯ ಚಟುವಟಿಕೆಗಳಿಗಾಗಿ (೨೦೧೨ ಮಾರ್ಚ್ ೧೮ರಂದು) ಹುಟ್ಟಿದ್ದು ಪದಾರ್ಥ ಚಿಂತಾಮಣಿ ಎಂಬ ಫೇಸ್‌ಬುಕ್ ಬಳಗ. 

ಪದಾರ್ಥ ಚಿಂತಾಮಣಿ (ಪಚಿಂ) ಬಳಗದಲ್ಲಿ ಕನ್ನಡದ ಯಾವುದೇ ಪ್ರದೇಶದ ಒಂದು ಪದವನ್ನು ಉಲ್ಲೇಖಿಸಿದರೂ ಆ ಪದದ ವ್ಯುತ್ಪತ್ತಿ, ವಿಸ್ತಾರ ಮತ್ತು ಪರಿಮಿತಿಗಳನ್ನು ಸುದೀರ್ಘವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿ ಹೇಳುವ ಕಾರ್ಯದಲ್ಲಿ ಅನೇಕ ಪರಿಣತರು ಪಚಿಂ ಬಳಗದಲ್ಲಿದ್ದಾರೆ. ಸುಮಾರು 5000 ಸದಸ್ಯರಿರುವ ಈ ಬಳಗದಲ್ಲಿ ಕಾಡುಹರಟೆ / ನಗೆಹನಿ / ರಾಜಕೀಯ / ಅನಗತ್ಯ ಚಿತ್ರಿಕೆಗಳು / ದರ್ಶಿಕೆಗಳು ಇವುಗಳಿಗೆ ಪ್ರವೇಶವಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ಈ ಬಳಗ ಬದುಕಿದೆ ಎಂದರೆ ಅದು ಅದರ ಅಂತಃಸತ್ವದಿಂದ ಮಾತ್ರ. ಇಂತಹ ಒಂದು ಬಳಗದಲ್ಲಿ ಒಬ್ಬರಾಗಿರಲು ನಾವು ಹೆಮ್ಮೆ ಪಡಬೇಕು. 

ಪದ ಕಮ್ಮಟ
ಪಚಿಂ ಬಳಗದಿಂದ ಆಯೋಜನೆಗೊಂಡ ಪ್ರಪ್ರಥಮ ಕಾರ್ಯಕ್ರಮ ಪದ ಕಮ್ಮಟ. ೨೦೧೫ರ ಜನವರಿ ೪ರಂದು ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆದ ಪದಕಮ್ಮಟಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಗಣ್ಯರು, ಅಭಿಮಾನಿಗಳು, ಪ್ರೇಕ್ಷಕರು ಸುಮಾರು ಸಂಖ್ಯೆಯಲ್ಲಿ ಭಾಗವಹಿಸಿ ಪದಕಮ್ಮಟದ ಅನುಭವ ತಮ್ಮದಾಗಿಸಿಕೊಂಡರು. ಮರೆತಿದ್ದೆ, ವಿದೇಶದಿಂದಲೂ ಈ ಕಮ್ಮಟಕ್ಕೆ ಬಂದಿದ್ದರು. 
ಉದ್ಘಾಟನಾ ಸಮಾರಂಭ:
ಎಲ್ಲಾ ಕಾರ್ಯಕ್ರಮಗಳಂತೆ ಇಲ್ಲಿಯೂ ಪ್ರಾರ್ಥನೆಯಿಂದ ಪ್ರಾರಂಭ. ಉಷಾ ಉಮೇಶ್ ದನಿಯಲ್ಲಿ ವಿಘ್ನೇಶ್ವರನಿಗೆ ಪ್ರಥಮ ಪ್ರಣಾಮ ಸಂದಿತು.
ಆಜಾದ್ ಐ.ಎಸ್ ಅವರಿಂದ ಸ್ವಾಗತ ಭಾಷಣ, ಮಂಜುನಾಥ್ ಕೊಳ್ಳೇಗಾಲ ಅವರಿಂದ ಪಚಿಂ ನಡೆದು ಬಂದ ಹಾದಿಯ ಸಂಕ್ಷಿಪ್ತ ವಿವರಣೆಯ ನಂತರ ಪದಕಮ್ಮಟವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಪದಕಮ್ಮಟದ ಉದ್ಘಾಟನೆ ಪದಜೀವಿ ಎಂದೇ ಪರಿಚಿತರಾಗಿರುವ ಜಿ. ವೆಂಕಟಸುಬ್ಬಯ್ಯನವರಿಂದ.

ಉದ್ಘಾಟನೆಯ ನಂತರ ಪದಜೀವಿಯಿಂದ ಕಿರು ಉಪನ್ಯಾಸ. ತಮ್ಮ ಕಿರು ಉಪನ್ಯಾಸದಲ್ಲಿ ಕನ್ನಡದ ಈಗಿನ ಸ್ಥಾನಮಾನ, ಪದಗಳ ಅವಶ್ಯಕತೆ, ಪದ ನಿರ್ಮಾಣದಲ್ಲಿರಬೇಕಾದ ಎಚ್ಚರಿಕೆ, ಹೊಸ ಪದದ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ವಿವರಿಸಿ ನಮ್ಮ ಮನವನ್ನು ಆವರಿಸಿಕೊಂಡರು.
ಪದಜೀವಿಯ ನುಡಿಗಳು:
ಪದಾರ್ಥ ಚಿಂತಾಮಣಿ ಎಂಬ ಶಬ್ದವನ್ನು ಲಾಂಗೂಲಾಚಾರ್ಯರು ಉಪಯೋಗಿಸಿದ್ದಾರೆ.
ಕಮ್ಮಟ = ಕರ್ಮಸ್ಥಾನ . ಕರ್ಮಠಾಣ (ಪ್ರಾಕೃತ್),  ಕಮ್ಮಠ್ (ತಮಿಳು), ಕಮ್ಮಟ (ಮಲಯಾಳ).
ಸುಮಾರು ೭೦೦೦ ಭಾಷೆಗಳಿವೆ, ೪೦೦ ಭಾಷೆಗಳು ಸತ್ತಿವೆ, ೬೭೦೦ ಭಾಷೆಗಳಿರಬಹುದು. ಎಷ್ಟು ಜನ ಅದನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವ ಆಧಾರದ ಮೇಲೆ ಕನ್ನಡಕ್ಕೆ ಇಲ್ಲಿ ೩೦ನೇ ಸ್ಥಾನ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ. ೨೦ ಮಾತ್ರ. ಹೀಗಿರುವುದರಿಂದ ಕನ್ನಡ ಭಾಷೆ ಎಂದೆಂದೂ ಉಳಿಯುವಂಥ ಭಾಷೆ, ಹಾಗೂ ಅದನ್ನು ಬೆಳೆಸಬೇಕಾದ ಅಗತ್ಯ ಉಂಟು.
೩೦ ವರ್ಷಕ್ಕೆ ಒಂದು ಸಲ ಭಾಷೆ ತುಂಬಾ ಬದಲಾವಣೆಯಾಗುತ್ತಾ ಹೋಗುತ್ತದೆ. ೨೦೦೦ ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಕನ್ನಡ. ಮೊದಲನೆಯ (ಹಲ್ಮಿಡಿ) ಶಾಸನ ಕ್ರಿ.ಶ. ೪೫೦ಕ್ಕೆ ಸೇರುತ್ತದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಹೀಗೆ ಬೇರೆ ಬೇರೆ ರೀತಿಯಲ್ಲಿ ಬೆಳೆದು ಬಂದಿದೆ. ಹೊಸಗನ್ನಡ ಬಂದು ಸುಮಾರು ೨೦೦ ವರ್ಷಗಳಾಗಿರಬಹುದು. ಈಗಿನ ಭಾಷೆಯನ್ನು ಆಧುನಿಕ ಕನ್ನಡ ಎಂದು ಕರೆಯಬಹುದು. ಕನ್ನಡ ಬೆಳೆದು ಬಂದಿರುವ ಸಮಯದಲ್ಲೇ ಶಬ್ದಗಳು ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬಂದಿವೆ. ಉದಾಹರಣೆಗೆ 'ಬಂತು' ಪದ, 'ಬಂದಿತು' ವ್ಯಾಕರಣ ಬದ್ಧ ಪದ. ಆದರೆ ಬಂತು ಎನ್ನುವ ಪದವನ್ನೇ ನಾವು ಬಳಸುತ್ತಿದ್ದೇವೆ. ಕಂಪ್ಯೂಟರ್ ಪ್ರಪಂಚದಲ್ಲಿ ಹೊಸ ಪದಗಳನ್ನು ನಿರ್ಮಾಣ ಮಾಡುತ್ತಿದ್ದೀರಿ. ಕೆಲವು ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಒಂದು ಪದಕ್ಕೆ ಎಂಟು ಹತ್ತು ಹತ್ತಿರದ ಅರ್ಥಗಳಿರುತ್ತವೆ. ಯಾವುದನ್ನು ಆರಿಸುತ್ತೀರಿ ಎಂಬುದನ್ನು ಎಚ್ಚರಿಕೆವಹಿಸಿ ಮಾಡಬೇಕಾಗುತ್ತದೆ.
ಅರ್ಥ ಹೇಗೆ ಹೆಚ್ಚಾಗುತ್ತದೆ ಎಂಬುದಕ್ಕೆ ಉದಾಹರಣೆ ನೋಡೋಣ. ಕನ್ನಡದಲ್ಲಿ ಮಾಡು, ಹೇಳು, ಹಾಕು, ಬಿಡು ಈ ರೀತಿಯ ಕೆಲವು ಪದಗಳಿವೆ. ಈ ಪದಗಳಿಗೆ ಹಿಂದೆ ನಾಮಪದ ಸೇರಿಸಿ ಉಪಯೋಗಿಸಿದರೆ ಎಷ್ಟು ಅರ್ಥ ಬದಲಾವಣೆ ಆಗುತ್ತದೆ ಎನ್ನುವುದು ಆಶ್ಚರ್ಯವಾಗುತ್ತದೆ. ತೆಗಿ ಎಂಬ ಶಬ್ದದಿಂದ ಪುಸ್ತಕತೆಗಿ, ಬಾಯಿತೆಗಿ, ಕಣ್ಣುತೆಗಿ, ಸೀರೆತೆಗಿ. ಹಾಗೆಯೇ "ನಾನು ಊಟ ಮಾಡ್ತೀನಿ ನೀನು ತಿಂಡಿ ಮಾಡು" ವ್ಯತ್ಯಾಸ ಗಮನಿಸಿ. ಶಬ್ದಗಳ ಅರ್ಥವ್ಯತ್ಯಾಸ ಹೊಂದುವುದರಿಂದ ಎಚ್ಚರಿಕೆವಹಿಸಬೇಕು.
ಈ ೨೦ ವರ್ಷಗಳಲ್ಲಿ ಎಷ್ಟು ವ್ಯಾಕರಣ ವಿರುದ್ಧವಾಗಿ ಪದಗಳ ನಿರ್ಮಾಣ ಆಗುತ್ತಿದೆ ಎಂದರೆ ಆಶ್ಚರ್ಯ ಆಗಬಹುದು. ಸಂಸ್ಕೃತ ಮತ್ತು ಕನ್ನಡದ ಶಬ್ದಗಳನ್ನು  ಸಾಮಾನ್ಯವಾಗಿ ಸೇರಿಸಲು ಆಗುವುದಿಲ್ಲ. ಆದರೆ ಅದು ಸೇರಿಸುತ್ತಿದ್ದಾರೆ. ಕೋಟ್ಯಂತರ, ಕೋಟ್ಯಾಂತರ. ಜಾತ್ಯತೀತ ಜಾತ್ಯಾತೀತ ಆಗಿದೆ. ಈಗ ಆಡುಮಾತಿನ ರೀತಿಯನ್ನು ಬರವಣಿಗೆಗೆ ಉಪಯೋಗ ಮಾಡುತ್ತಿದ್ದಾರೆ. ಮಾಡುವುದಿಲ್ಲ = ಮಾಡೋಲ್ಲ. ಬರೋಲ್ಲ, ಹೇಳೋಲ್ಲ, ... ಈ ರೀತಿಯ ಶಬ್ದಗಳು ಉಪಯೋಗಕ್ಕೆ ಬಂದಷ್ಟೂ ಹಾಗೆಯೇ ನಿಂತುಬಿಡುತ್ತವೆ. ಆದ್ದರಿಂದ ನೀವು ಮಾಡುತ್ತಿರುವ ಕೆಲಸ ತುಂಬಾ ಅಗತ್ಯವಾದ ಕೆಲಸ.
ಬೆಳೆಯುತ್ತಾ ಇರುವ ಕನ್ನಡವನ್ನು ಬೆಳೆಸುವ ಶಕ್ತಿ ನಿಮ್ಮ ಗುಂಪಿಗೆ ಇದೆ. ನೀವು ೫೦೦೦ ಜನ ಸೇರಿ ಒಂದು ಶಬ್ದವನ್ನು ಉಪಯೋಗ ಮಾಡಿದರೆ ಆ ಶಬ್ದ ಉಳಿದುಕೊಳ್ಳುತ್ತೆ. ಹಾಗಿಲ್ಲದೆ ಕೇವಲ ಕೆಲವು ಮಂದಿ ಉಪಯೋಗಿಸಿದರೆ ಅದು ಉಳಿಯುವುದಿಲ್ಲ. ಆದ್ದರಿಂದ ಗುಂಪಿನಲ್ಲಿ ಯಾವ ಶಬ್ದವನ್ನು ನಿರ್ಮಾಣ ಮಾಡುವಿರೋ ಆ ಪದ ನಿಲ್ಲತಕ್ಕದ್ದು. ಸಾಹಿತಿಗಳು ಕೂಡ ಅದನ್ನು ಉಪಯೋಗಿಸುತ್ತಾರೆ. ಮೌಸ್, ಫ್ಲೈಟ್ ಇಂಥಾ ಶಬ್ದಗಳೆಲ್ಲಾ ಉಳಿದುಕೊಂಡಿರುವಂತೆ ನೀವು ನಿರ್ಮಿಸಿದ ಪದಗಳೂ ಉಳಿಯುತ್ತವೆ. ಅದಕ್ಕೆ ಬೇಕಾದ್ದು ಎಲ್ಲರೂ ಒಂದೇ ಪದವನ್ನು ಉಪಯೋಗಿಸಬೇಕು. ನಿಮ್ಮಿಂದ ನಿರ್ಮಿತವಾದ ಒಂದು ಪದ ಬೇರೆ ಭಾಷೆಗಳಲ್ಲೂ ಬಳಕೆಯಾದರೆ ಪ್ರಪಂಚಕ್ಕೇ ಒಂದು ಪದ ನೀಡಿದ ಹಾಗೆ ಆಗುತ್ತದೆ. ಇದೊಂದು ಸ್ಮರಣೀಯ ಕಾರ್ಯ, ನಿಮಗೆಲ್ಲಾ ಯಶಸ್ಸು ಸಿಗಲಿ.

ಪದಕಮ್ಮಟದ ಸ್ಮರಣ ಸಂಚಿಕೆಯಾದ ಪದ ಸಂಸ್ಮರಣದ ಬಿಡುಗಡೆಯಾದದ್ದು ವಿಶೇಷ. ಕಾರ್ಯಕ್ರಮದಲ್ಲಿಯೇ ಸ್ಮರಣ ಸಂಚಿಕೆಯನ್ನು ಹೊರತಂದಿರುವುದು ಬಹುಶಃ ಫೇಸ್‌ಬುಕ್ ಬಳಗಗಳಲ್ಲೇ ಮೊದಲು. (ಸಂವಾದ / ಕಾರ್ಯಕ್ರಮಗಳು ಏರ್ಪಡುತ್ತವೆ ಆದರೆ ಯಾವುದೇ ಸ್ಮರಣ ಸಂಚಿಕೆಗಳು ಅಂದೇ ಬಿಡುಗಡೆಯಾಗಿದ್ದು ನನಗೆ ತಿಳಿದಿಲ್ಲ; ಸಾಮಾನ್ಯವಾಗಿ ಹೇಳುವುದು 'ಈ ಕಾರ್ಯಕ್ರಮದಲ್ಲಿ ಚರ್ಚಿತ ವಿಷಯಗಳನ್ನು ಒಂದು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಿದ್ದೇವೆ' ಎಂದು, ಈ ರೀತಿಯ ಯಾವ ಪುಸ್ತಕಗಳೂ ನನಗೆ ನೆನಪಿಲ್ಲ). ಸಂಚಿಕೆಯ ಸಂಪಾದಕರಾದ ಮಂಜುನಾಥ್ ಕೊಳ್ಳೇಗಾಲ ಅವರಿಂದ ಸ್ಮರಣ ಸಂಚಿಕೆಯ ಬಗ್ಗೆ ಕಿರು ಮಾಹಿತಿಯೂ ಲಭ್ಯವಾಯಿತು.

ಮಂಗಳೂರು ಆಕಾಶವಾಣಿಯಲ್ಲಿ ಸಹನಿರ್ದೇಶಕರಾಗಿರುವ ಡಾ॥ ವಸಂತಕುಮಾರ ಪೆರ್ಲರವರು ತಮ್ಮ ಅಧ್ಯಕ್ಷರ ಭಾಷಣದಲ್ಲಿ ಭಾಷೆಯ ಇತಿಹಾಸ, ಅವುಗಳ ಉಳಿವು, ಪರಿಮಿತಿಗಳು ಹಾಗೂ ಆ ಪರಿಮಿತಿಗಳನ್ನು ದಾಟುವ ಬಗೆಗಳನ್ನು ಅದ್ಭುತವಾಗಿ ವಿವರಿಸಿದರು.
ಕನ್ನಡ ಭಾಷೆ ದ್ರಾವಿಡ ಭಾಷೆಯ ಒಂದು ಟಿಸಿಲು. ಮೂಲ ದ್ರಾವಿಡ ಭಾಷೆಯಿಂದ ೨೬ ಭಾಷೆಗಳು ಹುಟ್ಟಿವೆ, ಒಂದು ದ್ರಾವಿಡ ಭಾಷೆ ಅಫ್ಘಾನಿಸ್ತಾನದಲ್ಲಿ ಇರುವುದು ದಿಗ್ಭ್ರಮೆಯನ್ನುಂಟುಮಾಡುತ್ತದೆ. ಆದರೆ ಈ ೨೬ ಭಾಷೆಗಳಲ್ಲಿ ಪಂಚದ್ರಾವಿಡ ಭಾಷೆಗಳು ಮಾತ್ರ ಪ್ರಾಮುಖ್ಯವನ್ನು ಉಳಿಸಿಕೊಂಡಿವೆ, ಅದಕ್ಕೆ ಮೂಲ ಕಾರಣ ಆ ಭಾಷೆಗಳು ಮೂಲ ದ್ರಾವಿಡ ಭಾಷೆಯೊಂದಿಗಿನ ಜೊತೆ ಉಳಿಸಿಕೊಂಡ ಸಾತತ್ಯ (continuity). ಮೂಲ ದ್ರಾವಿಡ ಭಾಷೆಯ ಮೊದಲ ಟಿಸಿಲು ತಮಿಳು, ನಂತರ ತುಳು, ಆ ನಂತರ ಕನ್ನಡ, ತೆಲುಗು ಮತ್ತು ಮಲಯಾಳಂ. ಭಾಷೆಗಳ ಉಳಿವಿಗೆ ಪ್ರಭಾವ ಪ್ರೇರಣೆಗಳು ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ. ಅದು ಆಡಳಿತದ ಕಾರಣಗಳಿರಬಹುದು, ವ್ಯಾಪಾರ, ವಾಣಿಜ್ಯ ಕಾರಣಗಳಿರಬಹುದು, ಹೆಚ್ಚು ಸಂಪರ್ಕ ಯಾವುದರ ಜೊತೆಗೆ ಇರುತ್ತವೋ ಅಂಥ ಪದಗಳು ಸ್ವೀಕಾರವಾಗುತ್ತವೆ.
ಭಾಷೆ ಒಂದು ಹರಿಯುವ ನದಿ ಇದ್ದಂತೆ.  ಪ್ರೊ. ಜಿ. ವೆಂಕಟಸುಬ್ಬಯ್ಯನವರು ಹೇಳಿದಂತೆ ಪ್ರತೀ ೩೦ ವರ್ಷಕ್ಕೆ ಭಾಷೆಯ ಸ್ವರೂಪ ಬದಲಾಗುತ್ತದೆ. ೩೦ ವರ್ಷ ಎನ್ನುವುದು ಒಂದು ತಲೆಮಾರಿನ ವಯೋಮಾನ. ಈ ಭಾಷಾ ನದಿ ತಿರುವು ಪಡೆದುಕೊಳ್ಳಬೇಕಾದರೆ ಕಾಲ, ಜನ ಸಮೂಹ, ಇತರ ಪ್ರಭಾವಗಳು ಮತ್ತು ಪ್ರೇರಣೆಗಳು ಕಾರಣವಾಗುತ್ತವೆ. ಭಾಷೆಯ ಸ್ವರೂಪ (form) ಸಹ ಬದಲಾಗುವುದೂ ಸಾದ್ಯ. ಷಟ್ಪದಿಗಳಿದ್ದಂತೆ ಚಂಪೂ ಕಾವ್ಯವಿಲ್ಲ. ಚಂಪೂ ಪ್ರಕಾರದಲ್ಲಿ ಗದ್ಯ ಪದ್ಯಗಳು ಮಿಶ್ರಣವಿತ್ತು. ವಚನಗಳು ಆಡುಭಾಷೆಯ ಪದಗಳನ್ನು ಹೊಂದಿದ್ದವು. ಸುಮಾರು ೧೫೦ - ೧೭೫ ವರ್ಷಗಳ ಕಾಲ ಕತ್ತಲೆಯ ಯುಗ. ದೇಶೀಯ ಭಾಷೆಗಳೆಲ್ಲ ಅಪ್ರಜ್ಞಾವಸ್ಥೆ ತಲುಪಿದ್ದು ಭಾರತ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಕಾಲವದು. ಈ ಅವಧಿಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಭಾಷೆಯ ಮಟ್ಟಿಗೆ ಆಗಲಿಲ್ಲ. ಜನಜೀವನ ಎಲ್ಲಕ್ಕೂ ಮೇಲೆ ಇರುವಂತದ್ದು. ಅದನ್ನು ನಿಯಂತ್ರಿಸುವ ಶಕ್ತಿ ರಾಜಕೀಯ ವ್ಯವಸ್ಥೆ ಹೊಂದಿರುತ್ತದೆ. ಜನಜೀವನ ಮತ್ತು ರಾಜಕೀಯ ವ್ಯವಸ್ಥೆಗಳ ಪ್ರಭಾವದಿಂದ ಭಾಷೆಯ ಸ್ವರೂಪದಲ್ಲಿ (form), ವಸ್ತು(content)ವಿನಲ್ಲಿ, ಹೇಳುವ ವಿಧಾನ(ಶೈಲಿ)ಯಲ್ಲಿ ಬದಲಾವಣೆಯನ್ನು ಕಂಡಿರುವುದನ್ನು ನಾವು ಹೊಸಗನ್ನಡದಲ್ಲಿ ಕಾಣಬಹುದು.
ಕನ್ನಡ ಭಾಷೆಯನ್ನು ಶಾಸ್ತ್ರೀಯಭಾಷೆಯಂತೆ ಅಧ್ಯಯನ ಮಾಡಬೇಕಾದ ಅವಶ್ಯಕತೆ ಈಗ ಇದೆ. ಇದಕ್ಕೆ ಕಾರಣ ಪರಂಪರೆಯ ಜೊತೆ ಸಾತತ್ಯವನ್ನು ಕಳೆದುಕೊಂಡಿರುವುದು. ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಧರಿಸಲಾಗುವುದಿಲ್ಲ. ಕನ್ನಡ ಭಾಷೆಯನ್ನು ಪೂರ್ಣವಾಗಿ ಅರಿಯಲು,  ಪದಗಳ ವ್ಯುತ್ಪತ್ತಿ, ಅರ್ಥ ವಿಂಗಡಣೆ ಮತ್ತು ಬಳಕೆಯ ಸಂದರ್ಭ ಇವು ಅತ್ಯಗತ್ಯ. ಈ ರೀತಿಯ ಪದವಿಶ್ಲೇಷಣೆ ಕೆಲಸವನ್ನು ಮಾಡುತ್ತಿರುವ ಶಿಸ್ತಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಪದಾರ್ಥ ಚಿಂತಾಮಣಿ ಕಾರ್ಯ ಶ್ಲಾಘನೀಯ. ಸುಮಾರು ೫೦೦೦ ಸದಸ್ಯರಿದ್ದರೆ ಪಚಿಂನ ಗಮನಿಸುವವರು ಸುಮಾರು ೫೦ ಸಾವಿರವಿರುತ್ತಾರೆ. ಬೆಂಗಳೂರಿನಲ್ಲಿಯೇ ಪಚಿಂನ ಮೊದಲ ಕಾರ್ಯಕ್ರಮ ನಿಗದಿಪಡಿಸಲು ಕೆಲವು ಕಾರಣಗಳುಃ ರಾಜ್ಯದ ರಾಜಧಾನಿ, ಹೆಚ್ಚು ಜನ ಸದಸ್ಯರು ಬೆಂಗಳೂರಿನವರು, ಪಚಿಂನ ಮೊದಲ ಹೆಜ್ಜೆ ಜನಬಲದಿಂದ ಕೂಡಿರಬೇಕಾದ್ದು, ಕಾರ್ಯಕ್ರಮಕ್ಕೆ ಬೇಕಾದ ಧನಬಲವನ್ನು ಕ್ರೋಢೀಕರಿಸುವ ಸಾಮರ್ಥ್ಯ.
ಕನ್ನಡಿಗರು ಇಂದು ಯಾವುದೇ ರೀತಿಯ ಸಕಾರಾತ್ಮಕ ಅಂಶಗಳನ್ನು ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಸಕಾರಾತ್ಮಕ ಭಾವನೆಗಳನ್ನು ಕನ್ನಡಿಗರು ಬೆಳೆಸಿಕೊಳ್ಳುವುದರಿಂದ ಕನ್ನಡಿಗರ ಗೆಲುವು. ಕೇವಲ ಕಾಲಾಳುವಾಗಿ ಸೈನ್ಯಕ್ಕೆ ಸೇರಿದ ಅನಕ್ಷರಸ್ಥ ಹೈದರಾಲಿ ಮುಂದೆ ಸೇನಾಧಿಕಾರಿಯಾಗಿ ಬೆಳೆಯುತ್ತಾನೆ. ಶಿಕ್ಷಣ ಮುಖ್ಯವಲ್ಲ, ವಿಷಯಪರ ಜ್ಞಾನ ಮುಖ್ಯ. ಈ ರೀತಿಯ ಆತ್ಮವಿಶ್ವಾಸ ಕನ್ನಡಿಗರು ಹೊಂದಬೇಕು. ಕಾವೇರಿಯಿಂದ ಗೋದಾವರಿಯವರೆಗೆ ಮಾತ್ರ ಕನ್ನಡಿಗರು ಸೀಮಿತವಾಗಿಲ್ಲ. ಅಂತರಜಾಲದ ಮುಖಾಂತರ ಕನ್ನಡಿಗರು ವಿಶ್ವದಾದ್ಯಂತ ಹರಡಿಕೊಂಡಿದ್ದೇವೆ. ಇಡೀ ಪ್ರಪಂಚವೇ ಕನ್ನಡ ಸಂಸ್ಕೃತಿಗೆ, ಕನ್ನಡ ಭಾಷೆಗೆ ಸೀಮಾರೇಖೆ. ಕನ್ನಡಕ್ಕೆ ಖಂಡಿತವಾಗಿ ಕನ್ನಡಿಗರು ಮರುಹುಟ್ಟನ್ನು ನೀಡುವ ಸಾಮರ್ಥ್ಯವಿದೆ. ಅಂತರಜಾಲದಲ್ಲಿ ಕನ್ನಡಿಗರು ಕನ್ನಡದ ಕೆಲಸ ಮಾಡುತ್ತಾ ಕನ್ನಡದ ಅಂತಃಸತ್ವವನ್ನು ಕಾಪಾಡಿಕೊಳ್ಳಬೇಕು.
ಕನ್ನಡಿಗರು ತಮ್ಮ ಬೇರಿನ ಜೊತೆ ಸಂಬಂಧವನ್ನು ಕಡಿದುಕೊಳ್ಳಬಾರದು. ಆಚಾರದಂತೆ ವಿಚಾರ. ಆಚಾರ ಬಾಹ್ಯಕ್ಕೆ ಸಂಬಂಧಿಸಿದ್ದು, ವಿಚಾರ ಅಂತರಂಗಕ್ಕೆ ಸಂಬಂದಿಸಿದ್ದು. ಎರಡೂ ಜೊತೆಯಾಗಿಯೇ ಇರಬೇಕು. ವಿಚಾರವಿಲ್ಲದ ಆಚಾರಕ್ಕೆ ಅರ್ಥವಿಲ್ಲ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ನಡೆ-ನುಡಿ, ವೇಷಭೂಷಣ ಇರಬೇಕು. ನಾವು ಆಚರಿಸಿಕೊಂಡೇ ನಮ್ಮ ಮುಂದಿನ ತಲೆಮಾರಿಗೆ ಅದನ್ನು ಹೇಳಿಕೊಡಬೇಕು. ಈ ಎಲ್ಲಾ ಕಾರ್ಯಕ್ಕೂ ಅಂತರಜಾಲ ಅತ್ಯಂತ ಪ್ರಶಸ್ತವಾದ ಶಸ್ತ್ರವಾಗಿ ನಮಗೆ ಒದಗಿ ಬಂದಿದೆ.

ರೂಪ ಸತೀಶ್ ಅವರಿಂದ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಸಮಾರಂಭ ಅಂತ್ಯಗೊಂಡು, ತಜ್ಞರ ಉಪನ್ಯಾಸಕ್ಕೆ ದಾರಿ ಮಾಡಿಕೊಟ್ಟಿತು.

ಪದ ಕಮ್ಮಟದ ಆಶಯ ಕಾರ್ಯಕ್ರಮಕ್ಕೂ ಮೊದಲೇ ನಿರ್ಧಾರಿತವಾಗಿತ್ತು. ಪ್ರಧಾನ ಸಮಿತಿ ಹಾಗೂ ಉಪ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಕಣ್ಣಿಗೆ ಕಟ್ಟುವಂತಿದ್ದು ಒಂದು ದಿನದ ಕಮ್ಮಟ ಯಶಸ್ವಿಗೊಳ್ಳಲು ಸಾಧ್ಯವಾಯಿತು.

ಚಿತ್ರಕೃಪೆ: ರಾಘವ್ ಶರ್ಮ.
ನಿರೀಕ್ಷಿಸಿ: ತಜ್ಞರ ಉಪನ್ಯಾಸಗಳು
------------------------------------------------------------------------------------------------------------
ಪ್ರೊ. ಜಿ. ವೆಂಕಟಸುಬ್ಬಯ್ಯನವರ ಉದ್ಘಾಟನಾ ಭಾಷಣ:
https://drive.google.com/file/d/0ByHVzg8bxD6xbEd2UVpVaFpIMkk/view?usp=sharing
ಡಾ॥ ವಿನೋದ್ ಕುಮಾರ್ ಪೆರ್ಲ ಅವರ ಅಧ್ಯಕ್ಷ ಭಾಷಣ:
https://drive.google.com/file/d/0ByHVzg8bxD6xeDhjVkF1VmV4T2s/view?usp=sharing

ಕನ್ನಡ ಸಂವಾದಿ ಪದಗಳ ಅವಶ್ಯಕತೆ
http://raddiyalladasuddi.blogspot.in/2014/07/blog-post_22.html



2 comments:

hamsanandi said...

ಧನ್ಯವಾದಗಳು!

ಜಲನಯನ said...

ಧನ್ಯವಾದಗಳು ಹರ್ಷ
ನಿಮ್ಮ ಬ್ಲಾಗನ್ನು ಈಗಲೇ ನೋಡಿದ್ದು. ನಿಮ್ಮ ಆಸಕ್ತಿಗೆ ನಮನ.
ಪಚಿಂ ಬಳಗದಲ್ಲಿ ಮತ್ತೆ ಕಾಣಿಸಿಕೊಳ್ಳಬೇಕೆಂದು ಕೋರುವೆ.
ಆಜಾದ್