Tuesday, October 31, 2017

ಸವಿ ಕನ್ನಡ - ಸಹಿ ಕನ್ನಡ

ಕನ್ನಡಿಗರು ಹಾಲಿನಂಥ ಜನ. ಯಾವ ಪಾತ್ರೆಗೆ ಹಾಕಿದರೆ ಆ ಪಾತ್ರೆಯಂತೆ ಕಾಣುವಂತೆಯೇ ಕನ್ನಡಿಗರೂ ಸಹ. ತಮಿಳುನಾಡಿಗೆ ಹೋದರೆ ತಮಿಳು, ಆಂಧ್ರಕ್ಕೆ ಹೋದರೆ ತೆಲುಗು, ಕರ್ನಾಟಕ ಶಿರ ದಾಟಿದರೆ ಹಿಂದಿ ಮಾತನಾಡಿಕೊಂಡು ಎಲ್ಲರೊಳಗೊಂದಾಗುವ ಮಂಕುತಿಮ್ಮರು.  ಮಾತೃಭಾಷೆಯಾಗಿ ಮಾತ್ರ ಮಹಾ/ನಗರ/ಪಟ್ಟಣಗಳಲ್ಲಿ ಉಳಿದಿರುವ ಕನ್ನಡ ಮನದ ಭಾಷೆಯಾಗಿ ಉಳಿಯುತ್ತದೆಯೇ ಎಂಬುದು ಪ್ರಶ್ನೆ. ಕರ್ನಾಟಕ ಹೇಳಲು ಮಾತ್ರ ಕನ್ನಡಿಗರ ರಾಜ್ಯ, ಮನೆಭಾಷೆಯಾಗಿ / ಮಾತೃಭಾಷೆಯಾಗಿ ಕನ್ನಡ ಬಳಸುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಸುಳ್ಳಲ್ಲ. ಕನ್ನಡ ಮಾಧ್ಯಮ ಅನಾಥ ಕೂಸು; ಸವಲತ್ತುಗಳಿಲ್ಲದ ಶಿಕ್ಷಕರಿಲ್ಲದ ಕನ್ನಡ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಓದಿಸಲು ಕಷ್ಟವಾದವರಿಗೆ ಮಾತ್ರ ಮೀಸಲು. ಸರಿ... ಇದನ್ನು ಸರಿಪಡಿಸಲು ಆಗುತ್ತದೆಯೇ ? ಮನದ ಭಾಷೆಯಾಗಿ ಉಳಿದಾಗ ಮಾತ್ರ ಕನ್ನಡ ಮಾಧ್ಯಮ, ಕನ್ನಡ ಶಾಲೆಗಳು, ಕನ್ನಡ ಪ್ರಜ್ನ್ಯೆ ಉಳಿಯಲು ಸಾಧ್ಯ. 

ಸಹಿ ಎನ್ನುವುದು ನಮ್ಮದೇ ಆದ ಒಂದು ಚಿನ್ಹೆ. ಸುಲಭವಾಗಿ ನಕಲಿಸಬಹುದಾದರೆ ಅದು ಮತ್ತಷ್ಟು ತೊಂದರೆಗಳಿಗೆಡೆ ಮಾಡುವುದೂ ಉಂಟು. ಸಾಕ್ಷರರೆಲ್ಲಾ ಇಂಗ್ಲೀಷ್ನಲ್ಲೇ ಸಹಿ ಮಾಡುವುದು ತುಂಬಾ ಸಾಮಾನ್ಯ. ಈ ಸಹಿಗೆ ರಾಜ್ಯ, ಭಾಷೆಯ ಗಡಿಗಳಿಲ್ಲ, ಆ ಮಟ್ಟಿಗೆ ಅದು ಜಾಗತಿಕ.  ನಮ್ಮ ಮನೆಯಲ್ಲೇ ಯಾರೂ ಕನ್ನಡದಲ್ಲಿ ಸಹಿ ಮಾಡುವವರಿಲ್ಲ; ನನ್ನನ್ನು ಹೊರತುಪಡಿಸಿ.ಅಪ್ಪ ಅಣ್ಣ ಅಕ್ಕ ತಂಗಿ ಮಕ್ಕಳು ಯಾರದೂ ಕನ್ನಡದಲ್ಲಿ ಸಹಿ ಇಲ್ಲ, ಎಲ್ಲರೂ ಕನ್ನಡಿಗರೇ. ಅಮ್ಮ ಕನ್ನಡದಲ್ಲಿ ನಕಲಿಸಲು ಅಸಾದ್ಯವಾದ ಸಹಿ ಮಾಡುತ್ತಿದ್ದರು. 

ನಾನು ೨೦೦೭ರಿಂದ ಸಹಿಯನ್ನು ಕನ್ನಡದಲ್ಲೇ ಮಾಡುತ್ತಿದ್ದೇನೆ. ಕೆಲವು ಸಮಸ್ಯೆಗಳನ್ನೂ ಸಲಹುತ್ತಿದ್ದೇನೆ. ಪ್ಯಾನ್ ಕಾರ್ಡ್ ಮಾಡಿಸುವಾಗ ೨೦೦೪ರಲ್ಲಿ ಇಂಗ್ಲೀಷ್ನಲ್ಲಿ ಸಹಿ ಮಾಡಿದ್ದೆ. ಯಾವುದೇ ಬ್ಯಾಂಕ್/ದುಡ್ಡು ಕಾಸಿನ ವಿಚಾರಕ್ಕೆ ಬಂದಾಗ ಎಲ್ಲರೂ ಆ ಸಹಿಯೇ ಬೇಕು ಎಂದು ಕೇಳುತ್ತಾರೆ. ಒಂದು ದೃಡೀಕರಣ ಪತ್ರ (Declaration Form) ಕೊಟ್ಟರೆ ಆ ಸಮಸ್ಯೆ ಮುಗಿಯುತ್ತದೆ. ಪ್ಯಾನ್ ಕಾರ್ಡ್ ಬರೀ ಭಾರತಕ್ಕೆ. ವಿಶ್ವಪರ್ಯಟನೆಗೆ ಬೇಕಾದ ಪಾಸ್'ಪೋರ್ಟ್ ಸಹಿ ಕನ್ನಡದಲ್ಲಿದೆ. ಪ್ಯಾನ್ ಕಾರ್ಡ್ ಜೊತೆ ಪಾಸ್ ಪೋರ್ಟ್ ಕೊಟ್ಟರೆ ಆ ದೃಡೀಕರಣವೂ ಬೇಕಿಲ್ಲ.

ये सही है !! ಕನ್ನಡಿಗರೆಲ್ಲಾ ಕನ್ನಡದಲ್ಲಿ ಸಹಿ ಮಾಡಬಹುದಲ್ಲವೇ ? ಚತುಷ್ಕೋಟಿ ಕನ್ನಡಿಗರಲ್ಲಿ ಎಷ್ಟು ಜನ ಕನ್ನಡದಲ್ಲಿ ಸಹಿ ಮಾಡುತ್ತಾರೆ ?  ಕನ್ನಡಿಗರು ಎಂದು ತೋರಿಸಿಕೊಳ್ಳುವುದು ಹೇಗೆ ? ತೋರ್ಪಡಿಕೆಯ ಅವಶ್ಯಕತೆಯ ಬಗ್ಗೆ ಹೇಳುತ್ತಿಲ್ಲ, ಅವಕಾಶ ಸಿಕ್ಕಾಗ ಬಳಸಿಕೊಳ್ಳುವುದು ತಪ್ಪಲ್ಲ ಅಲ್ಲವೇ?  ಸಹಿಯೊಂದಿಗೆ ಪ್ರಾರಂಭವಾಗಲಿ ಈ ನಡೆ, ನಡೆಯಲಿ ಕನ್ನಡ ನುಡಿ ಜಾತ್ರೆ.  

ಕನ್ನಡ ಹಬ್ಬದ ಶುಭಾಶಯಗಳು

Summary in English: 
Kannada is regional language of Karnataka state, that has population of over 60 million. People who can read write Kannada / whose mother tongue is Kannada, their signature will be in English. Better to start signing in their mother tongue.

No comments: