Wednesday, December 31, 2014

ಗೋವಿನ ಹಾಡು-ಪಾಡು

ಗೋವಿನ ಹಾಡು ಎನ್ನುತ್ತಿರುವಂತೆ ಹಳೆಯ ಹಾಡು ನೆನಪಾಯಿತೇ, ಇಲ್ಲ ಇವತ್ತು ಆ ಹಾಡನ್ನು ಹಾಡುವ ಸ್ಥಿತಿಯಲ್ಲಿಲ್ಲ. ಮತ್ತದೇ ಹಾಡನ್ನು ಎಷ್ಟು ಸಲ ಕೇಳುತ್ತೀರಿ? ಇಂದು ನಾ ಹಾಡುವುದು ನನ್ನ ಪಾಡಿನ ಹಾಡು. "ನೀನಾರಿಗಾದೆಯೋ ಎಲೆ ಮಾನವ" ಎಂದು ಯಾವಾಗಲೋ ಕೇಳಿದ್ದೆ. ಆದರೂ ನರಮಾನವರಿಗೆ ಅರ್ಥವಾಗಲಿಲ್ಲ. ಅದಕ್ಕೆ ಈ ಬಾರಿ ನನ್ನ ನಿಟ್ಟುಸಿರಿನ ಪಾಡು ನಾನೇ ಹೇಳುತ್ತಿದ್ದೇನೆ. 
ನನ್ನ ವೈರಿಯೆಂದೇ ಎಂದುಕೊಂಡಿದ್ದ ಹುಲಿಯನ್ನು ನರಭಕ್ಷಕ ಹುಲಿ ಎಂಬ ಪಟ್ಟ ಕಟ್ಟಿ ನರಮಾನವರು ಕೊಂದರು. ಬಲಿಷ್ಟ ಹುಲಿಯನ್ನೇ ಕೊಂದವರಿಗೆ ನಾನು ಯಾವ ಲೆಕ್ಕ? ವಿಷಯ ಅದಲ್ಲ, ನರಮಾನವರು ನಮಗೆ ಕೊಡುತ್ತಿರುವ ಗೌರವಾದರ(!)ಗಳನ್ನು ಹೇಳಬೇಕೆಂದಿದ್ದೇನೆ. ಗೋವುಗಳನ್ನು ಸಂಪತ್ತು ಎಂದೆಣಿಸುವ ಕಾಲ ಯಾವಗಲೋ ಮುಗಿದಿದೆ. ಈಗ ನಾವು ಬರೀ ಬದುಕಬೇಕು ಅಷ್ಟೆ. ಬದುಕುವುದಕ್ಕೂ ಎಷ್ಟೊಂದು ಅಡೆತಡೆ.


ಇಂದು ರಾಜೇಶ್ ಶ್ರೀವತ್ಸರು ಬರೆದಿದ್ದರು ಕಾಜಾಣದಲ್ಲಿ:

"ಬೆಂಗಳೂರು ನಗರದ ಕೊಳಕಿನ ಬಗ್ಗೆ ಎಷ್ಟೋ ಜನ ಎಷ್ಟೋ ಬರೆದಾಯಿತು, ನಾವೆಲ್ಲಾ ಓದಿದ್ದಾಯ್ತು. ನಾನು ಹಿಂದೊಮ್ಮೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ತೋಗೂರು ಕೆರೆಯ ಬಗ್ಗೆ ಬರೆದಿದ್ದೆ. ಆ ಕೊಳಕಿಗೆ ಹೆದರಿ ಮತ್ತೆ ಅತ್ತ ತಲೆ ಹಾಕಿರಲಿಲ್ಲ. ಇವತ್ತು ಮದ್ಯಾಹ್ನ ಕೆಲಸದ ಮೇಲೆ ಗ್ರಾಮ ಪಂಚಾಯ್ತಿಗೆ ಹೋಗಬೇಕಿತ್ತು. ಒಳ್ಳೆಯ ರಸ್ತೆಯಲ್ಲಿ ಹೋದರೆ 30 ನಿಮಿಷ, ಈ ದಾರಿಯಲ್ಲಿ ಹೋದರೆ 5 ನಿಮಿಷ ಎಂದು ಗಟ್ಟಿ ಮನಸು ಮಾಡಿ ಕೆರೆ ದಂಡೆಯಲ್ಲಿ ನಡೆದು ಹೊರಟೆ. ಏನೂ ಬದಲಾಗಿರಲಿಲ್ಲ ಅಥವಾ ಇನ್ನೂ ಹದಗೆಟ್ಟಿತ್ತು.  ನನ್ನ ಹಿಂದೆ ಯಾವುದೋ ಹೋಟೆಲ್‌ನ ಕಸ ಹೊತ್ತ ಗಾಡಿ ಧೂಳೆಬ್ಬಿಸುತ್ತಾ ಬಂದು ರಸ್ತೆ ಬದಿಯ ಪಕ್ಕ ಧೊಪ್ಪೆಂದು ಒಂದಷ್ಟು ಕಸ ಎಸೆದು ಮುಂದೆ ಸಾಗಿತು. ನನ್ನ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಬಂದೆ. ಹೋಟೆಲ್ ಗಾಡಿ ಕಸ ಎಸೆದ ಜಾಗದಲ್ಲಿ ಎರಡು ದನಗಳು ಮೇಯುತ್ತಾ ನಿಂತಿದ್ದವು. ಮನಸ್ಸು (ಮೂಗು) ಬೇಡ ಬೇಡವೆಂದರೂ ಅರೆನಿಮಿಷ ಅಲ್ಲೇ ನಿಂತು ಹೋಟೆಲ್ ಕಸ ಮೇಯುತ್ತಿರುವ ದನಗಳ ಚಿತ್ರ ತೆಗೆದೆ. ಕೆಟ್ಟ ಕುತೂಹಲದಿಂದ ಎರಡು ಹೆಜ್ಜೆ ಮುಂದೆ ಹಾಕಿ ಅದೇನೆಂದು ನೋಡಿದರೆ.... ಆ ಪ್ಲಾಸ್ಟಿಕ್ ಚೀಲದ ತುಂಬಾ ಹಳಸಿದ ಬಿರಿಯಾನಿ, ಅನ್ನದ ಜೊತೆ ಮಾಂಸ ಮೂಳೆಯ ತುಂಡುಗಳು. ಹಸು ಅದನ್ನೇ ಅರಿವಿಲ್ಲದೆ ತಿನ್ನುತ್ತಾ ಇದ್ದದ್ದನ್ನು ನೋಡಿದ ಮೇಲೆ ಯಾಕೋ ದುಃಖ, ಜಿಗುಪ್ಸೆ ಆವರಿಸಿ ಮನಕೆ ಮಂಕು ಕವಿದಿದೆ."

ನಾನಷ್ಟೆ ಅಲ್ಲ, ಯಾವ ನಮ್ಮ ಬಂಧು ಬಳಗದವರೂ ಮೂಳೆಗಳನ್ನು ತಿನ್ನುವುದಿಲ್ಲ, ತಿನ್ನಲಾಗದು. ಅದು ಬಿಡಿ. ಹಸಿರಿಲ್ಲದ ಈ ಕಾಲದಲ್ಲಿ ನನಗೆ ಪ್ಲಾಸ್ಟಿಕ್ ಕಸವೇ ಗತಿ.  ಈ ನನ್ನ ಸ್ಥಿತಿಗೆ ಕಾರಣೀಭೂತರ ಬಗ್ಗೆ ಹೇಳುತ್ತೇನೆ

1. ನನ್ನ ಒಡೆಯ:
ಒಡೆಯನನ್ನೇ ದೂರಿದ ಅಪಮಾನ ಒದಗಿದರೂ ನಾನಿದನ್ನು ಹೇಳಲೇಬೇಕು. ಗೊಡ್ಡು ದನವಾದರೆ ನಮಗೆ ನೆಲೆಯಿಲ್ಲ. ಕಾಮಧೇನುವಿನಂತಹ ಹಸುವಾದರೂ ನಮಗೆ ಸರಿಯಾದ ಆಹಾರವಿಲ್ಲ. ಆಹಾರವಿಲ್ಲದಿದ್ದರೂ ನಾವು ಹಾಲು ಕೊಡಲೇಬೇಕು, ಇಲ್ಲದಿದ್ದರೆ ನಮಗೆ ಸಿಗುವ ಅಲ್ಪ ಆಹಾರವೂ ನಾಸ್ತಿ, ಗೊಡ್ಡು ದನದ ಪಟ್ಟ ಕಟ್ಟಿಟ್ಟ ಬುತ್ತಿ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ನಮಗಲ್ಲ, ಜಡ್ಡು ಜಾಪತ್ರೆಗಳಿಗೆ ಸರಿಯಾದ ಆರೈಕೆಗಳಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ನಾವು ಈಗ ಒಂಟಿ ಸ್ವಾಮಿ. ಹೋರಾಟದ ಹಾದಿ ನಮಗೆ ತಿಳಿದಿಲ್ಲ, ಹೋರಾಡಬೇಕೆಂದರೂ ಜೊತೆಗಾರರಿಲ್ಲ. ಮೊನ್ನೆ ಘಾಟಿ ಜಾತ್ರೆಯಲ್ಲಿ ನನ್ನನ್ನೂ ಮಾರಲು ಹೋಗಿದ್ದರು, ನಾನು ಸ್ವಲ್ಪ ಗಲಾಟೆ ಮಾಡಿದ್ದಕ್ಕೆ ನನ್ನನ್ನು ಯಾರೂ ಕೊಳ್ಳಲಿಲ್ಲ. ಎಲ್ಲಾ ಮನುಷ್ಯರೂ ಒಂದೇ ಅನಿಸುತ್ತೆ. ಕಾಣದ ದೈವಕ್ಕಿಂತ ಕಂಡಿರುವ ದೆವ್ವವೇ ಒಳ್ಳೆಯದೆಂದು ಈ ಒಡೆಯನೊಂದಿಗೇ ದಿನ ಕಳೆಯುತ್ತಿದ್ದೇನೆ. ಆಹಾರ ಸಾಲುವುದಿಲ್ಲ ಎಂದು ಕಂಡ ಕಂಡಲ್ಲಿ ನುಗ್ಗಲು ನಾವೇನು ಬೀದಿ ನಾಯಿಗಳೇ? ಹಾಗೂ ನುಗ್ಗಿದರೆ ನನ್ನ ಒಡೆಯನ ಮೇಲೆ ದೂರು ಕೊಡುತ್ತಾರೆ. ಮೇಯಲು ಜಾಗವೆಲ್ಲಿ ಸ್ವಾಮಿ? ಆಹಾರವೂ ಇಲ್ಲ, ಮೇಯಲು ಜಾಗ ನಿಗದಿಯಾಗಿಲ್ಲ, ಮೇಯಲು ಹಸುರಿಲ್ಲ. ನಾನು ಬದುಕುವುದಾದರೂ ಹೇಗೆ?

2. ಆಡಳಿತ ವ್ಯವಸ್ಥೆ
ವ್ಯವಸ್ಥೆಯನ್ನು ದೂರುವಷ್ಟು ದೊಡ್ಡವರಲ್ಲ ನಾವು, ಆದರೆ ಇದು ಈಗ ಅನಿವಾರ್ಯ. ನೈರ್ಮಲ್ಯದ ಪಾಠ ಮನುಷ್ಯರಿಗೆ ಪ್ರಧಾನ ಮಂತ್ರಿ ಕಡೆಯಿಂದ ಬರುತ್ತದೆ, ಆದರೂ ಅದು ಸರಿಯಾಗಿ ಕಾರ್ಯನಿರ್ವಹಣೆ ಆಗುವುದಿಲ್ಲ ಎಂದರೆ ಅದು ಆಡಳಿತದ ದುರ್ವ್ಯವಸ್ಥೆ. ಕಸ ಸಂಗ್ರಹಣೆ ನಡೆದರೂ ಅದರ ನಿರ್ವಹಣೆ ಇಲ್ಲ, ದಾರಿಯಲ್ಲಿ ಕಸ ಚೆಲ್ಲಿಕೊಂಡು ಹೋಗುವುದು ಸಹ ಕಸ ವಿಲೇವಾರಿಯ ಒಂದು ಮಾರ್ಗ. ಕಸ ವಿಲೇವಾರಿ ಜಾಗಕ್ಕೇ ಗಲಾಟೆಗಳು. ಬೆಂಗಳೂರಿನ ಕಸವನ್ನು ಮಂಡೂರು, ದೊಡ್ಡಬಳ್ಳಾಪುರದ ಆರೂಡಿ ಹೀಗೆ ಎಲ್ಲೆಲ್ಲೋ ವಿಲೇವಾರಿ ಮಾಡಬೇಕಾದ ಅನಿವಾರ್ಯತೆ. ಕಸ ನಿರ್ವಹಣೆಗೆ ಸರಿಯಾದ ಮಾರ್ಗಸೂಚಿಗಳು ಇದ್ದರೂ ಅವು ಕಾರ್ಯನಿರ್ವಹಿಸುವುದಿಲ್ಲ. ನಗರ ಪಾಲಿಕೆಗಳು, ಪುರಸಭೆ ನಗರ ಸಭೆಗಳಿಗೆ ಕಸ ವಿಲೇವಾರಿ, ನಿರ್ವಹಣೆಗಳಿಗೆ ರಾಜಕೀಯದ ಮಧ್ಯೆ ಬಿಡುವಿಲ್ಲ. ಹೀಗಿರುವಾಗ ನಮ್ಮಂಥ ಯಕಃಶ್ಚಿತ್ ಪ್ರಾಣಿಗಳಿಗೆ ಉಚಿತವಾಗಿ ಸಿಗುವುದು ಕಸ ಮತ್ತು ಹೊಡೆತ ಮಾತ್ರ. ಇದು ಬರೀ ನನ್ನ ಸಮಸ್ಯೆಯಲ್ಲ, ಎಲ್ಲಾ ಪ್ರಾಣಿಗಳದ್ದೂ, ನರಮಾನವರದ್ದೂ ಸೇರಿ. 

3. ಪರಿಸರ ಸಂಘಟನೆಗಳು
ನೀವು - ನಾವು ಜೀವಿಸುತ್ತಿರುವ / ಜೀವಿಸದಿರುವ ಎಲ್ಲ ಭೂಭಾಗಗಳು, ಸಕಲ ಜೀವಿಗಳು ಸೇರಿ ಪರಿಸರ. ನಾವು ಪರಿಸರದ ಭಾಗವಲ್ಲವೇ? ನಮ್ಮ ಆಹಾರವನ್ನು ನರಮಾನವರು ಕಿತ್ತುಕೊಂಡಿಲ್ಲವೇ? ನಮಗೆ ಮೇಯಲು ಎಲ್ಲಿದೆ ಹಸಿರು? ಪರಿಸರ ಎಂದರೆ ಬರೀ ನದಿ, ಕೆರೆ, ಕೊಳ, ಅರಣ್ಯಗಳಲ್ಲ ಸ್ವಾಮಿ. ಪರಿಸರ ಸಂಘಟನೆಗಳೆಂಬ ಹೆಸರಿನ ವ್ಯಾಪ್ತಿಗೆ ತಕ್ಕಂತೆ ಕೆಲಸ ಮಾಡುವಿರೆಂದು ನಂಬುವುದು ತಪ್ಪೇ?

4. ಪ್ರಾಣಿ ದಯಾ ಸಂಘಗಳು
ಯಾವ ಪ್ರಾಣಿಗೆ ತೊಂದರೆಯಾದರೂ ಪ್ರಾಣಿ ದಯಾ ಸಂಘಗಳು ಬರುತ್ತವೆಯಂತೆ. ನಾನಂತೂ ಕಂಡಿಲ್ಲ. ಎಲ್ಲವೂ ಬರೀ ತೋರಿಕೆಯೆಂದೇ ಎನಿಸುತ್ತದೆ ನನಗೆ. ದೂರು ಕೊಟ್ಟರೆ ಅಥವಾ ಸುದ್ದಿಯಾದರೆ ಮಾತ್ರ ಬರುವ ಅವರು ಒಳ್ಳೆಯ ಕೆಲಸವನ್ನೇ ಮಾಡುತ್ತಿರಬಹುದು, ಆದರೆ ನಮ್ಮ ಈ ಸ್ಥಿತಿಯನ್ನು ದೂರು ಕೊಡುವವರಾರು? ದೂರು ಕೊಟ್ಟರೆ ಆಗುವುದು ಪ್ರಾಣಿಗಳಿಗೆ ಚಿಕಿತ್ಸೆಯೇ ಹೊರತು ವ್ಯವಸ್ಥೆಯ ಬದಲಾವಣೆಯಲ್ಲ. 

ದೂರಂತೂ ದೂರದ ಮಾತು, ಅದಕ್ಕೇ ನಾನೇ ಸುದ್ದಿಯಾಗಬೇಕೆಂದು ಹೇಳುತ್ತಿದ್ದೇನೆ. ಸ್ವಯಂಪ್ರೇರಣೆಯಿಂದ ಸಂಘಟನೆಯ ವಿಭಾಗಗಳು ಕೆಲವು ಸ್ಥಳಗಳನ್ನು ಗುರುತಿಸಿಕೊಂಡು ಅಲ್ಲಿನ ಪ್ರಾಣಿಗಳನ್ನು ಗಮನಿಸಿದರಲ್ಲವೇ ಆ ಸಂಘಟನೆಗಳಿಗೆ ಒಂದು ಅರ್ಥ ಬರುವುದು? 

ನನ್ನ ಪಾಡನ್ನು ಹೇಳಿದ್ದೇನೆ. ಕಾಯುವಿರೋ ಕೊಲ್ಲುವಿರೋ ನಿಮಗೇ ಬಿಟ್ಟಿದ್ದು.