Sunday, December 7, 2014

ಕಲಾಚೇತನ - 2014 ( ನವೆಂಬರ್ 30)

ಹಿಂದೂ ಸೇವಾ ಪ್ರತಿಷ್ಟಾನದ ಭಾಗವಾದ ವಿದ್ಯಾಚೇತನ 2009ರಲ್ಲಿ ಪ್ರಾರಂಭವಾಗಿ ಈವರೆಗೆ 2000ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. (ಪ್ರಾಥಮಿಕ/ಹಿರಿಯ ಪ್ರಾಥಮಿಕ/ ಪ್ರೌಢ) ಶಾಲೆಗಳ ಮಕ್ಕಳಿಗೆ ವಿದ್ಯೆ ಎಂಬುದು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಬಾರದು. ಚಿಗುರುಮನಸುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ನೀಡುವ ಉದ್ದೇಶದಿಂದ ಆಯೋಜನೆಗೊಂಡ ಕಾರ್ಯಕ್ರಮ ಕಲಾಚೇತನ. 16 ಸೇವಾಕೇಂದ್ರಗಳ 200ಕ್ಕೂ ಹೆಚ್ಚು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿತ್ತು ಈ ವರ್ಷದ ಕಲಾಚೇತನ. 2014ರ ಕಲಾಚೇತನ ನಡೆದದ್ದು ಬನಶಂಕರಿಯಲ್ಲಿರುವ Our School ಶಾಲೆಯಲ್ಲಿ. ಅಲ್ಲಿ ನಡೆದ ಅನೇಕ ಕಾರ್ಯಕ್ರಮಗಳ ಸಣ್ಣ ಝಲಕ್ ಈ ಬರಹ. 


ರಂಗೋಲಿ:
ರಂಗೋಲಿ ನಮ್ಮ ಸಂಸ್ಕೃತಿಯ ಒಂದು ಭಾಗ. ಹಿಂದೂಗಳ ಮನೆಯ ಮುಂದೆ ರಂಗೋಲಿ ಇಲ್ಲದಿದ್ದರೆ ಅದು ಅಚ್ಚರಿಯಷ್ಟೆ. ಮನೆಯ ಮುಂದೆ ಬಿಡಿಸಿರುವ ರಂಗೋಲಿ ಮಕ್ಕಳು ನೋಡಿಯೇ ಬೆಳೆಯುತ್ತಾರೆ. ಆ ರಂಗೋಲಿಗಳಿಗೇ ಇಲ್ಲಿ ಸ್ಪರ್ಧೆ. ಪ್ರತೀ ಸೇವಾಕೇಂದ್ರದಿಂದಲೂ ರಂಗೋಲಿ ಸ್ಪರ್ಧೆಗೆ ಮಕ್ಕಳು ಇದ್ದದ್ದು ವಿಶೇಷ. 


ಚಿತ್ರಕಲೆ:
ಬಣ್ಣಗಳಲ್ಲೇ ಆಟವಾಡಬಲ್ಲ ಪ್ರತಿಭೆಗಳಿಗೆ ವೇದಿಕೆ ಚಿತ್ರಕಲೆ ಸ್ಪರ್ಧೆ. A3 ಹಾಳೆಯ ಜಾಗದಲ್ಲೇ ಬಗೆಬಗೆಯ ಚಿತ್ರ ಬಿಡಿಸಿ ಜನರನ್ನು ಮೋಡಿ ಮಾಡಿದರು.

ಚರ್ಚಾ ಸ್ಪರ್ಧೆ:
ಓದಿದವನು ಜ್ಞಾನಿಯಾಗುವನು, ಚರ್ಚಾಕೂಟದಲ್ಲಿ ಭಾಗವಹಿಸುವವನು ಸರ್ವಸಮ್ಮತ ಮಾನವನಾಗುವನು, ಬರೆಯುವ ರೂಢಿ ಇರುವವನು ದೋಷವಿಲ್ಲದ ಪಂಡಿತನೆನೆಸಿಕೊಳ್ಳುವನು. (Reading maketh a full man, conference a ready man, and writing an exact man. - Sir Francis Bacon (1561 - 1626)) ಚರ್ಚಾಸ್ಪರ್ಧೆ ಭಾಷಣಕಾರರಾಗಬಲ್ಲ ಪ್ರತಿಭೆಗಳಿಗೆ ಒಂದು ವೇದಿಕೆ. "ದೂರದರ್ಶನ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕ" ಎಂಬ ವಿಷಯದ ಬಗ್ಗೆ ಏಳರಿಂದ ಹತ್ತನೇ ತರಗತಿಯ ೧೮ ಪ್ರತಿಭೆಗಳು ವಾದವನ್ನು ಮಂಡಿಸಿದರು. ಪ್ರತಿಭೆಗಳ ಆತ್ಮವಿಶ್ವಾಸ, ಮಾತಿನ ವೈಖರಿ, ವಿಷಯದ ವಿಸ್ತಾರ, ಸಮಯದ ಬಳಕೆ ಮುಂತಾದ ಅಂಶಗಳಿಂದ ಮೌಲ್ಯಮಾಪನ ನಡೆಯಿತು. 


(ಧರ್ಮ) ರಸಪ್ರಶ್ನೆ:
ಪ್ರತೀ ಕೇಂದ್ರದಿಂದಲೂ ೪ ಜನರ ಗುಂಪು ಭಾಗವಹಿಸಬಹುದಾಗಿದ್ದ ರಸಪ್ರಶ್ನೆಗೆ ಎಲ್ಲಾ ಕೇಂದ್ರಗಳಿಂದಲೂ ಸ್ಪರ್ಧಿಗಳಿದ್ದರು. ರಸಪ್ರಶ್ನೆ ಎರಡು ಹಂತಗಳಲ್ಲ್ಲಿ ನಡೆಯಿತು. ಮೊದಲನೆಯ ಹಂತದಲ್ಲಿ ಪ್ರತೀ ಗುಂಪಿನ ನಾಲ್ಕೂ ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಪತ್ರಿಕೆಗಳನ್ನು ನೀಡಿ ಉತ್ತರಿಸಲು ೩೦ ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ನಂತರ ಅವುಗಳ ಮೌಲ್ಯಮಾಪನ ನಡೆಸಿ ಅಗ್ರ ೬ ತಂಡಗಳನ್ನು ಎರಡನೆಯ ಹಂತಕ್ಕೆ ಕಳುಹಿಸಲಾಯಿತು. 
ಎರಡನೆಯ ಹಂತದಲ್ಲಿ ನಾಲ್ಕು ಸುತ್ತುಗಳು. ೧. ಪ್ರಶ್ನೋತ್ತರ ೨. ಸ್ಥಳಗಳನ್ನು ಗುರುತಿಸುವುದು, ಸರಿಯಾಗಿ ಗುರುತಿಸಿದರೆ ಮತ್ತೆ ಒಂದು ಬೋನಸ್ ಪ್ರಶ್ನೆ ೩. ವ್ಯಾಖ್ಯಾನದ ಹೌದು / ಇಲ್ಲ. ಹಾಗೂ ಅದರ ಸರಿಯಾದ ರೂಪ. ೪. ತೀಕ್ಷ್ಣ ಪ್ರತಿಕಿಯೆ ಬಯಸುವ ಸುತ್ತು.
ರಸಪ್ರಶ್ನೆಯಲ್ಲಿ ಕೇವಲ ಪ್ರಶ್ನೋತ್ತರಗಳಲ್ಲದೆ ವಿಷಯ ವಿಸ್ತಾರಕ್ಕೂ ಗಮನಕೊಟ್ಟಿದ್ದು ವಿಶೇಷ. "ಅಶ್ವತ್ಥಾಮ ಹತಃ ಕುಂಜರಃ" ಎಂಬ ವಾಖ್ಯದ ಸಂದರ್ಭವನ್ನು ಸಂಪೂರ್ಣವಾಗಿ ವಿವರಿಸಿದ ಪ್ರತಿಭೆಗಳೂ ಅಲ್ಲಿದ್ದರು.

ಸಮೂಹ ಗಾನ:
ಒಂದು ತಂಡವಾಗಿ ತಮ್ಮ ಗಾಯನ ಪ್ರತಿಭೆ ಹೊರಹಾಕಲು ಕೊಟ್ಟ ವೇದಿಕೆ ಸಮೂಹ ಗಾನ. 


ಬೀದಿ ನಾಟಕ:
ಅಭಿನಯ ಚಾತುರ್ಯ ಪ್ರದರ್ಶನಕ್ಕೆ ತಕ್ಕ ವೇದಿಕೆ ನಾಟಕ. ಬೀದಿ ನಾಟಕ ಸ್ಪರ್ಧೆಯಲ್ಲಿ ಇದುವರೆಗೂ ಪ್ರದರ್ಶನವಾಗದ ನಾಟಕಗಳ ಪ್ರದರ್ಶನ ನಿಯಮವಿತ್ತು. ಪ್ರತೀ ತಂಡವೂ ಸಾಮಾಜಿಕ ಸಮಸ್ಯೆಗಳಿಗೆ (ಮೂಢನಂಬಿಕೆ ವಿರೋಧೀ ಜಾಗೃತಿ, ತಮ್ಮ ವೃತ್ತಿಧರ್ಮ ಪಾಲಿಸಬೇಕು ಎಂಬ ಅಂಶ, ಭ್ರಷ್ಟಾಚಾರ ವಿರೋಧಿ ಅಂಶ) ಒತ್ತುಕೊಟ್ಟು ನಾಟಕ ಪ್ರದರ್ಶಿಸಿದರು. ಪ್ರತೀ ನಾಟಕವೂ ವಿಭಿನ್ನವಾಗಿತ್ತು.


ಯೋಗ ಪ್ರದರ್ಶನ:
ದೇಹಕ್ಷಮತೆ ಕಾಪಾಡುವಲ್ಲಿ ಯೋಗ ಪ್ರಾಣಾಯಾಮಗಳು ಮುಖ್ಯ ಪಾತ್ರವಹಿಸುತ್ತವೆ. ನಿತ್ಯ ಜೀವನದಲ್ಲಿ ಯೋಗಾಸನಗಳಿಗೂ ಸ್ಥಾನ ಕೊಟ್ಟಿರುವ ಹಲವು ಕುಟುಂಬಗಳು ಈಗಲೂ ಇವೆ. ಯೋಗ ಸ್ಪರ್ಧೆಯಲ್ಲಿ ಕಠಿಣವಾದ ಆಸನಗಳನ್ನು ಸಹ ನಿರಾಯಾಸವಾಗಿ ಪ್ರತಿಭೆಗಳು ಪ್ರದರ್ಶಿಸಿದರು. 

ಗೀತಾಪಠಣ:
ನ್ಯಾಯಾಲಯದಲ್ಲೂ ಗೀತೆಯ ಮೇಲೆ ಪ್ರಮಾಣ ಮಾಡುವವರೆಗೆ ಭಗವದ್ಗೀತೆಗೆ ಪ್ರಾಮುಖ್ಯವಿದೆ. ತರಗತಿಗಳಿಗೆ ಅನುಗುಣವಾಗಿ ವಿಂಗಡಿಸಿದ್ದ ಜೂನಿಯರ್ - ಸೀನಿಯರ್ ವಿಭಾಗಗಳಲ್ಲಿ ಗೀತೆಯ ಕೆಲವು ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕಿತ್ತು.  ಹಿಂದೂ ಧರ್ಮವಲ್ಲದೇ ಅನ್ಯಧರ್ಮೀಯ ಪ್ರತಿಭೆ ಸಹ ಗೀತಾಪಠಣ ಮಾಡಿದ್ದು ವಿಶೇಷ. 

ಸಮೂಹ ನೃತ್ಯ:
ಕಲಾಚೇತನದ ಪ್ರತಿಭಾನ್ವೇಷಣೆಯಲ್ಲಿ ಮುಖ್ಯವಾದ ಕಾರ್ಯಕ್ರಮ ಸಮೂಹ ನೃತ್ಯ. ಪ್ರತೀ ಸೇವಾಕೇಂದ್ರದಿಂದ ೮ ಜನರ ಒಂದು ತಂಡವನ್ನು ಈ ಸ್ಪರ್ಧೆಗೆ ಕಳುಹಿಸಬಹುದಾಗಿತ್ತು. ಜನಪ್ರಿಯ ಹಾಡುಗಳಿಗೇ ಸ್ವಲ್ಪ ವಿಭಿನ್ನ ರೀತಿಯ ನೃತ್ಯ ಸಂಯೋಜನೆಯಿಂದ ಈ ಸ್ಪರ್ಧೆ ಗಮನಸೆಳೆಯಿತು.


ಎಲ್ಲಾ ಸ್ಪರ್ಧೆಗಳ ನಂತರ ಬಹುಮಾನ ವಿತರಣೆ. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ತಮ್ಮ ಕಿರು ಭಾಷಣದೊಂದಿಗೆ ಕಾರ್ಯಕ್ರಮವನ್ನು ಶ್ಲಾಘಿಸಿದರು. ಬಹುಮಾನ ವಿತರಣೆಯಲ್ಲಿ ವಿದ್ಯಾರ್ಥಿಗಳ ಕುತೂಹಲ ವರ್ಣಿಸಲಸದಳ.

ಇಡೀ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸ್ವಯಂಸೇವಕರು ಮತ್ತು Our School ಶಾಲೆಯ ಸಹಯೋಜನೆ ಉತ್ತಮವಾಗಿತ್ತು. ಇಂಥ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ ವಿದ್ಯಾಚೇತನಕ್ಕೆ ನನ್ನ ನಮನ.

Photo Credits: Mayur and Santosh Sahoo

3 comments:

KARTHIK said...

ThumBa ChannaGi Vivarisideera DP

Harsha D P said...

ನಿಮಗಾಗಿ. ಬರ್ತೀನಿ ಎಂದು ಬರಲಿಲ್ಲ ತಾವು.

AnbaKing 3GOD said...

excellent :)