Wednesday, December 3, 2014

ಇದೇ ನನ್ನ ಉತ್ತರ (ಹೂವಿನೊಂದಿಗೆ ನಾರು)

ಕನ್ನಡದ ಏಕೈಕ ಸರಸ್ವತಿ ಸಮ್ಮಾನ್ ನಮ್ಮ ಒಲುಮೆಯ ಎಸ್ಎಲ್‌ಬಿ. (೨೦೧೧ರಲ್ಲಿ ಕನ್ನಡಕ್ಕೆ ಸರಸ್ವತಿ ಸಮ್ಮಾನ್ ಎಸ್. ಎಲ್. ಭೈರಪ್ಪನವರ ಮುಖಾಂತರ ಒಲಿಯಿತು.) ಈ ಮೇರು ವ್ಯಕ್ತಿತ್ವ ಹೊಂದಿರುವ ಭೈರಪ್ಪನವರೊಂದಿಗೆ ಸಮಯ ಕಳೆಯುವುದು ಎಂಥವರಿಗೂ ರೋಮಾಂಚನ ಉಂಟು ಮಾಡುವಂಥದ್ದು. ನವಂಬರ್ ೨೩ರಂದು ಮೈಸೂರಿನ NIE ಕಾಲೇಜಿನಲ್ಲಿ ಅನೌಪಚಾರಿಕ ಸಂವಾದವನ್ನು ಏರ್ಪಡಿಸಿದ್ದು Dr. S L Bhyrappa Kadambari Priyara Koota ಎಂಬ facebook ಗುಂಪು. ಆಯ್ದ ೧೨೦ ಜನರ ಒಂದು ಕಾರ್ಯಕ್ರಮದಲ್ಲಿ ಡಾ॥ ಎಸ್. ಎಲ್. ಭೈರಪ್ಪನವರು ತಮ್ಮ ಅನಾರೋಗ್ಯದ ನಡುವೆಯೂ ಜನರ ಪ್ರಶ್ನೆಗಳಿಗೆ ಉತ್ತರಿಸಿದರು.  ಈ ಮೂರು ತಾಸುಗಳ ಕಾರ್ಯಕ್ರಮದಲ್ಲಿ ನನ್ನ ಪ್ರಶ್ನೆಗಳಿಗೂ ಉತ್ತರಿಸಿದ್ದು ಮರೆಯಲಾರದ ಅನುಭವ. 

ಕಾರ್ಯಕ್ರಮಕ್ಕೆ ೩೦ ನಿಮಿಷ ಮುಂಚಿತವಾಗಿಯೆ ನಮ್ಮ ಪ್ರಶ್ನೆಗಳನ್ನು ಬರೆಯಬೇಕಿತ್ತು. ಏನು ಕೇಳುವುದು ? ಕೇಳಲೇಬೇಕೇ ? ಈ ಪ್ರಶ್ನೆಗಳು ಬೇರೆಯವರೂ ಕೇಳಿರಬಹುದಲ್ಲಾ ... ಹೀಗೆ ಹಲವು ಪ್ರಶ್ನೆಗಳು ನನ್ನಲ್ಲಿ. ಒಂದೆರಡು ತಾಸು ಯೋಚಿಸಿದ ನಂತರ (ಸಾಮಾನ್ಯವಾಗಿ) ಯಾರೂ ಕೇಳಿರದ ಪ್ರಶ್ನೆಗಳು ಸಿದ್ದವಾದವು !!


ಪ್ರಶ್ನೆಗಳ ಹಿನ್ನೆಲೆ:
ಬೇರೆ ಮಾಧ್ಯಮಗಳಿಲ್ಲದ ಕಾಲದಲ್ಲಿ ಪುಸ್ತಕವೇ ಜನರ ಮಿತ್ರ. ಈಗ ಆ ಮಿತ್ರನ ಸ್ಥಾನ ಸ್ಮಾರ್ಟ್ ಫೋನ್, ಟ್ಯಾಬ್, ಲ್ಯಾಪ್‌ಟಾಪ್ ಮುಂತಾದವು ಆಕ್ರಮಿಸಿವೆ. ಕನ್ನಡದ ಬಗ್ಗೆ ಅಭಿಮಾನ ಶೂನ್ಯತೆ ಆವರಿಸಿ ಮಾತೃಭಾಷೆ ಕನ್ನಡವಾಗಿದ್ದರೂ ಮನೆ ಭಾಷೆ ಇಂಗ್ಲೀಷ್ ಆಗುತ್ತಿರುವ ಕಾಲ. ಕೆಲವರಿಗೆ ಆಸಕ್ತಿ ಇದ್ದರೂ ಇತರೆ ಕಾರಣಗಳಿಂದ (ಸಮಯ, ಕಣ್ಣಿನ ತೊಂದರೆ, ವೃದ್ದಾಪ್ಯ) ಓದಲು ಸಾದ್ಯವಾಗದಿರಬಹುದು. ಜನರಲ್ಲಿ ಓದಿನ ಆಸಕ್ತಿ ಕಡಿಮೆಯಾಗಿರುವುದು ಸತ್ಯ (ನನ್ನನ್ನೂ ಸೇರಿ); ಓದಿನ ಸುಖ ಅನುಭವಿಸುವವರ ಸಂಖ್ಯೆ ಶೂನ್ಯವೂ ಆಗಿರಬಹುದು. ಹೀಗಿರುವಾಗ ಕನ್ನಡ ಪುಸ್ತಕಗಳನ್ನು ಮುಂದಿನ ಪೀಳಿಗೆಯವರು ಓದುತ್ತಾರೆ ಎಂದು ಹೇಗೆ ಹೇಳುವುದು. ನಮ್ಮ ಹಾಗೂ ಮುಂದಿನ ಪೀಳಿಗೆಗೆ ಬೇರೆ ಮಾಧ್ಯಮಗಳ ಮೂಲಕ ಓದಿನ ರುಚಿ ಹತ್ತಿಸಬೇಕಾದ ಅನಿವಾರ್ಯತೆ ಒದಗಿದೆ.  

ಬೇರೆ ಮಾಧ್ಯಮಗಳು ಎಂದ ಕೂಡಲೆ ನೆನಪಾಗುವುದು ದೃಶ್ಯ ಮಾಧ್ಯಮ, ಶ್ರಾವ್ಯ ಮಾಧ್ಯಮ ಹಾಗೂ ಪತ್ರಿಕೋದ್ಯಮ. ಶ್ರಾವ್ಯ ಮಾಧ್ಯಮವನ್ನು ಬಳಸಿ audio book ಮಾಡಬಹುದು. ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಬಹುದು. 
ದೃಶ್ಯ ಮಾಧ್ಯಮದಲ್ಲಿ ಮತ್ತೆ ಕವಲುಗಳು; ದೂರದರ್ಶನ ಮತ್ತು ಸಿನಿಮಾ. ಸಿನಿಮಾ ವಿಭಾಗಕ್ಕೆ ಬಂದರೆ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಎಂದೇ ಹೇಳಬಹುದು. ಓದಿಗೇ ಸೀಮಿತವಾಗುವಂತ ಬೆಳದಿಂಗಳ ಬಾಲೆ ಕಾದಂಬರಿಯನ್ನೂ ಸಿನಿಮಾ ಮಾಡಿದ ಕಲೆಗಾರರು ಕನ್ನಡದಲ್ಲಿದ್ದಾರೆ. ಕೆಲವು ಕಾದಂಬರಿ / ಪುಸ್ತಕಗಳು ಧಾರಾವಾಹಿಯಾಗಿ ಕೂಡ ಬಂದಿವೆ. ಒಂದು ಕೃತಿ ದೃಶ್ಯ ಮಾಧ್ಯಮಕ್ಕೆ ಬಂದರೆ ಅದರ ಲೇಖಕರಿಗೆ ಅದು ತೃಪ್ತಿ ತಂದಿರುತ್ತದೆಯೇ ಎಂಬುದು ಪ್ರಶ್ನೆ. ವಿಷ್ಣುವರ್ಧನ್, ಅಂಬರೀಶ್, ಧೀರೇಂದ್ರ ಗೋಪಾಲ್ ಅವರುಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಾಗರಹಾವು ಚಿತ್ರ ತ.ರಾ.ಸು. ಅವರ ಕಾದಂಬರಿ ಆಧಾರಿತ ಚಿತ್ರ. ಆದರೆ ಅದು ತರಾಸು ಅವರಿಗೆ ತೃಪ್ತಿ ತಂದಿರಲಿಲ್ಲ (ಒಳ್ಳೆ ಕೇರೆ ಹಾವು ಇದ್ದಂತಿದೆ ಎಂದರಂತೆ). 
ಭೈರಪ್ಪನವರ ಕಾದಂಬರಿಗಳಾದ ವಂಶವೃಕ್ಷ, ನಾಯಿನೆರಳು, ಮತದಾನ ಸಿನಿಮಾಗಳಾಗಿದ್ದರೆ ಗೃಹಭಂಗ ಧಾರಾವಾಹಿಯಾಗಿ ಲಭ್ಯವಿದೆ. ಇವುಗಳ ಬಗ್ಗೆ ಅವರ ಅಭಿಪ್ರಾಯ ತಿಳಿಯುವ ಕುತೂಹಲ ನನ್ನದು.

ಪ್ರಶ್ನೆ ಹಾಗೂ ಉತ್ತರ
ಪ್ರಶ್ನೆಃ ಜನರಲ್ಲಿ ಓದಿನ ಆಸಕ್ತಿ ಕಡಿಮೆಯಾಗಿದೆ / ಕಡಿಮೆಯಾಗುತ್ತಿದೆ. ಅದರ ಜೊತೆಯಲ್ಲಿಯೇ ಕಾದಂಬರಿ ಪ್ರಕಾರ / ನೀಳ್ಗತೆಗಳು ಕಡಿಮೆಯಾಗಿವೆ. ಹಳೆಯ / ಹೊಸ ಬರಹಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದರಿಂದ ಹೆಚ್ಚು ಜನರನ್ನು ತಲುಪಬಹುದು ಎಂದು ನಿಮಗೆ ಅನಿಸುತ್ತದೆಯೇ? ಈವರೆಗೆ ದೃಶ್ಯ ಮಾಧ್ಯಮಕ್ಕೆ ಬಂದಿರುವ ನಿಮ್ಮ ಬರಹಗಳು ನಿಮಗೆ ತೃಪ್ತಿ ತಂದಿದಿಯೇ ? ನಿಮ್ಮ ಯಾವ ಕಾದಂಬರಿಯನ್ನು ದೃಶ್ಯ ಮಾಧ್ಯಮದಲ್ಲಿ ನೋಡಲು ಬಯಸುತ್ತೀರಿ, ಹಾಗೂ ಅದರ ನಿರ್ದೇಶಕರು ಯಾರಾಗಿದ್ದರೆ ಚೆನ್ನ ?

ಉತ್ತರಃ ನನ್ನ ಯಾವ ಕಾದಂಬರಿಯನ್ನೂ ದೃಶ್ಯ ಮಾಧ್ಯಮದಲ್ಲಿ ಬರಬೇಕು ಅನ್ನುವ ಬಯಕೆ ನನಗೆ ಇಲ್ಲ. ಯಾರಾದರೂ ಅದನ್ನು ಮಾಡ್ತೀವಿ ಎಂದು ಬಂದರೆ ಅವರ ಹಿಂದಿನ ಕೃತಿಗಳನ್ನು ನೋಡಿ ಹೇಳುತ್ತೇನೆಯೇ ಹೊರತು ದೃಶ್ಯ ಮಾಧ್ಯಮದಲ್ಲಿ ನನ್ನ ಕಾದಂಬರಿ ಬರುವುದರಿಂದ ನನಗೆ ಯಾವುದೇ ರೀತಿಯ ಅನುಕೂಲ ಇಲ್ಲ, ನನ್ನಿಂದ ಅವರಿಗೆ ಅನುಕೂಲವಾಗುತ್ತೆ, ಏಕೆಂದರೆ,  ಪ್ರಾರಂಭದಲ್ಲಿಯೇ ಅವರಿಗೆ ಒಂದು ಪಬ್ಲಿಸಿಟಿ ಇರುತ್ತೆ. ಅಷ್ಟೆ. ಅದೇ ಬೇರೆ, ಇದೇ ಬೇರೆ. ಓದುವಾಗ ಓದುಗನಿಗೆ ಅವನ ಕಲ್ಪನೆಗೆ ತುಂಬಾ ಅವಕಾಶ ಇರುತ್ತೆ. ಆ ದೃಶ್ಯ ಮಾಧ್ಯಮದಲ್ಲಿ ಅವರು ಏನು ತೋರಿಸಿರುತ್ತಾರೊ ಅಲ್ಲಿಗೆ ಹಿಡಿದು ನಿಂತುಬಿಡುತ್ತೆ. ಹಾಗೂ ಅದು ನನ್ನ ಕ್ಷೇತ್ರವೂ ಅಲ್ಲ.

ಕಾರ್ಯಕ್ರಮದ ವೀಡಿಯೋ 

No comments: