ಎಲ್ಲರಿಗೂ ದುರ್ಮುಖಿ ಸಂವತ್ಸರದ ಶುಭಾಶಯಗಳು.
ದುರ್ಮುಖಿ - ಹೆಸರೇ ಭಯಂಕರವಾಗಿದೆ; ಸ್ವಲ್ಪ ಲಘುಹಾಸ್ಯದಿಂದಲೇ ಪ್ರಾರಂಭಿಸೋಣ. ಇಂಗ್ಲಿಷ್ ಕ್ಯಾಲೆಂಡರಿಗೆ ಒಗ್ಗಿರುವ ನಮಗೆ ೨೦೧೬ ಚೆನ್ನಾಗಿ ಕೇಳಿಸುತ್ತೆ, ೨೦೧೫-೧೬ರ ಆರ್ಥಿಕ ವರ್ಷ ಈಗ ತಾನೇ ಮುಗಿದ ಸಂದರ್ಭದಲ್ಲೇ ನಮ್ಮ ಹಿಂದೂ ಸಂವತ್ಸರವೂ ಕಾಲಿಡುತ್ತಿದೆ. ಯಾವಾಗಲೂ ಹೀಗೇ ಬಿಡಿ. ಕೆಲವು ಸಲ ಇಂಗ್ಲೀಷ್ ಕ್ಯಾಲೆಂಡರ ಮುಂದಿದ್ದರೆ ಕೆಲವು ಸಲ ಹಿಂದು ಸಂವತ್ಸರ. ನಾವು ಯಾಕೆ ಸಂಖ್ಯಾ ವರ್ಷ ಬಿಟ್ಟು ಹೆಸರುಗಳಿರುವ ಸಂವತ್ಸರ ಬಳಸುತ್ತಿದ್ದೇವೆ ? ಯಾರಿಗಾದರೂ ಈ ಪ್ರಶ್ನೆ ಕಾಡಿದ್ದರೆ ಇಲ್ಲಿದೆ ಉತ್ತರ ತಕ್ಕ ಮಟ್ಟಿಗೆ; ನಂಬುವುದೂ ಬಿಡುವುದೂ ನಿಮಗೇ ಬಿಟ್ಟಿದ್ದು. ಪ್ರತೀ ವರ್ಷಕ್ಕೂ ಅದರದೇ ಆದ ಪ್ರಭಾವ ಇರುತ್ತದಂತೆ, ಸಂಖ್ಯಾಶಾಸ್ತ್ರ ಪಂಡಿತರೂ ಇದೇ ತತ್ತ್ವ ಪಾಲಿಸುತ್ತಾರೆ ಅಲ್ಲವೇ. ೨೦೧೬ = ೨ + ೦ + ೧ + ೬ = ೯... ಒಂಭತ್ತು... ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು. ಸಂವತ್ಸರ ಎಂದರೆ ಏನು, ಅದರ ಹಿನ್ನೆಲೆ ಏನು ಅನ್ನೋದಕ್ಕೆ ಈ ಪುಟ ಒಮ್ಮೆ ನೋಡಿ. ಸಂವತ್ಸರದ ಪಟ್ಟಿ ಬೇಕಾದರೆ ನಮ್ಮ ವಿಕಿ ಹೇಳ್ತಾನೆ, ಓದಿಕೊಳ್ಳಿ
ಸಂವತ್ಸರಗಳ ನಾಮಜಪ ಬಿಟ್ಟು ಮುಂದೆ ಬರೋಣ.
ಈಗ ತಾನೇ ವರ್ಷಾಂತ್ಯದ ಬೇಯುವಿಕೆಯಲ್ಲಿ ಅಥವಾ ಮಕ್ಕಳ ಪರೀಕ್ಷೆ ಬಿಸಿಯಲ್ಲಿ ಬೆಂದಿದ್ದೀವಿ, ತಲೆಗೆ ಎಣ್ಣೆ ಹಚ್ಚಿಕೊಂಡು ಹಂಡೆ ಬಿಸಿ ನೀರಿನಲ್ಲಿ ಮಂಡೆ ಬಿಸಿ ಮಾಡಿಕೊಳ್ಳಿ. ಮಾವಿನ ತೋರಣ ಕಟ್ಟಿದ್ದೀರೆಂದು ನಂಬಿದ್ದೇವೆ. ಆಮೇಲೆ ಈ ವರ್ಷವನ್ನೂ ಕಳೆದ ವರ್ಷಗಳಂತೆಯೇ ಬಂದಂತೆ ಸ್ವೀಕರಿಸುತ್ತೇವೆ ಎಂದು ಹೇಳಿಕೊಂಡು ಬೇವು ಬೆಲ್ಲ ತಿನ್ನಿ. ಬೇವಿನ ಹೂ, ಎಲೆಗಳನ್ನು ಬಿಸಾಡಿ ಬರೀ ಬೆಲ್ಲ ತಿಂದು ಸುಖವನ್ನೇ ಬಯಸಿದರೆ ನಾವು ಜವಾಬ್ದಾರರಲ್ಲ. ಬಹುಶಃ ಎಲ್ಲರಿಗೂ ರಜೆ ಇದೆ (ನನಗಿಲ್ಲ, ಅದಕ್ಕೆ ಬಹುಶಃ ಎಂದಿದ್ದು), ಮೂರ್ಖರ ಪೆಟ್ಟಿಗೆ / ದೂರದರ್ಶನದ ಪ್ರತೀ ವಾಹಿನಿಯಲ್ಲೂ ನೀವು ಭಯಭೀತರಾಗುವ ಜ್ಯೋತಿಷ್ಯ ಬರುತ್ತದೆ, ಕೇಳಿ ಸ್ವಲ್ಪ ಸೀರಿಯಸ್ ಆಗಿ ತಲೆ ಕೆಡಿಸ್ಕೊಳಿ. ಆ ನಂತರ ಬೇರೆ ಇನ್ನೇನು ಮಾಡೋದು, ಅದೇ ವಾಹಿನಿಯಲ್ಲೇ ಸಂತೆಗಳು / ಜಾತ್ರೆಗಳು / ಯುಗಾದಿ ವಿಶೇಷಗಳು ಅಂತೆಲ್ಲಾ ಯಾವೋ ಕಾರ್ಯಕ್ರಮಗಳು ಬರುತ್ತವೆ. ನೋಡಿ - ಯಾವುದನ್ನೂ ತಲೆಗೆ ಹಚ್ಕೋಬೇಡಿ (ಈಗಾಗಲೇ ಭವಿಷ್ಯದ ಹುಳ ನಿಮ್ಮ ತಲೆಯಲ್ಲಿರುತ್ತದೆ). ಜಾಹೀರಾತು(ಥು)ಗಳ ಮಧ್ಯೆ ಕಾರ್ಯಕ್ರಮ ನೋಡುವಾಗ ಬೇಜಾರೂ ಆಗುವಷ್ಟರಲ್ಲಿ ......... ಊಟದ ಸಮಯ. ನೆಮ್ಮದಿಯಾಗಿ ಊಟ ಮಾಡಿ. ಸಾದ್ಯವಾದರೆ ಊಟದ ನಂತರ ಒಂದು ನಿದ್ದೆ ಮಾಡಿ.
ಯಪ್ಪಾ... ಗೊತ್ತಿರೋದನ್ನೇ ಎಷ್ಟು ಕೊರೀತಿದಿಯೋ ಅಂತಿದ್ದೀರಾ... ಹೊರಟೆ.. ಹೊರಡೋ ಮುಂಚೆ ಇನ್ನೊಂಚೂರು...
ನನಗೆ ಹೊಸ ವರ್ಷ, ಯುಗಾದಿ, ನನ್ನ ಹುಟ್ಟು ಹಬ್ಬ ಎಲ್ಲಾ ರಜ ತೊಗೊಳೋಕ್ಕೆ ಕಾರಣಗಳು ಅಷ್ಟೇ. ಭವಿಷ್ಯವನ್ನು ನೋಡುತ್ತೇನೆ ನಂಬುವುದಿಲ್ಲ. ನಮ್ಮ ಯೋಗ್ಯತೆ ನಮಗೆ ಗೊತ್ತಿರುವಾಗ ಯಾವ ಯೋಗ ನಮಗೆ ಏನು ಮಾಡುತ್ತೆ ಹೇಳಿ ?