ವಿಶ್ವ ಆಹಾರ ದಿನದ ಆಚರಣೆ ೧೯೮೧ರಿಂದ ಆಚರಣೆಯಲ್ಲಿದೆ ! ಪ್ರತೀ ವರ್ಷವೂ ಒಂದು ಉದ್ದೇಶ/ಮೂಲ ಅಂಶ(theme)ದೊಂದಿಗೆ ಆಚರಿಸಲಾಗುತ್ತದೆ, ಈ ವರ್ಷದ ಉದ್ದೇಶ "ಒಂದು ಭವಿಷ್ಯ - ಶೂನ್ಯ ಹಸಿವು" (One Future, Zero Hunger).
ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ ಎಂಬ ಪ್ರಾರ್ಥನೆಯೊಂದಿಗೆ ಊಟವನ್ನು ಪ್ರಸಾದವೆಂದು ಭಾವಿಸುವ ಭಾರತದಲ್ಲಿ ಹಸಿವು - ಇದೆ. ಭಾರತದಲ್ಲಿನ ಹಸಿವಿಗೂ ವಿಶ್ವದಲ್ಲಿನ ಹಸಿವಿಗೂ ಸ್ವಲ್ಪ ವ್ಯತ್ಯಾಸ ಇದೆ ಎನಿಸುತ್ತದೆ. ಭಾರತದಲ್ಲಿ / ಹಿಂದುಳಿದ ದೇಶಗಳಲ್ಲಿ ಹಸಿವಿಗೆ ಕಾರಣ ಬಡತನ. ವಿಶ್ವದಲ್ಲಿ ಕೆಲವು ಕಡೆ ಆಹಾರ ಪದಾರ್ಥಗಳ ಅಭಾವದಿಂದಲೂ ಹಸಿವು ಇದೆ.
ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಹಾರದ ಕೊರತೆಯನ್ನು ನೀಗಿಸುವಲ್ಲಿ ಹಲವು ಸಂಸ್ಥೆಗಳು, ಸರ್ಕಾರಗಳೂ ಹಲವು ಕಾರ್ಯಕ್ರಮಗಳಡಿಯಲ್ಲಿ ಕೆಲಸ ಮಾಡುತ್ತಿವೆ. ಕರ್ನಾಟಕ ಸರ್ಕಾರದ 'ಅನ್ನಭಾಗ್ಯ' ಹಲವು ಮಕ್ಕಳಿಗೆ ಶಾಲೆಯ ದಾರಿ ತೋರಿಸಿದೆ. ದಕ್ಷಿಣಭಾರತದ ಹಲವು ದೇವಸ್ಥಾನಗಳಲ್ಲಿ ಪ್ರತಿದಿನ ಅನ್ನದಾನ ನಡೆಯುತ್ತದೆ. "ಅಕ್ಷಯಪಾತ್ರ" ಈಗಾಗಲೇ ೧೭ ಕೋಟಿ ಮಕ್ಕಳಿಗೆ ಆಹಾರ ಹಂಚಿದೆ. ಇವುಗಳ ಜೊತೆಗೆ ಎಷ್ಟೋ ಸಂಘ ಸಂಸ್ಥೆಗಳು ತಮ್ಮ ಪರಿಮಿತಿಯಲ್ಲಿಯೇ ಆಹಾರ ಹಂಚಿಕೆ ಮಾಡುತ್ತಿವೆ.
ಹಸಿವುಮುಕ್ತ ಭಾರತಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ಕೃಷಿಗೆ ಬೆಂಬಲ. ಒಂದು ಕಡೆ ಸಾಲದ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗುವ ರೈತರಿದ್ದರೆ, ಮತ್ತೊಂದು ಕಡೆ ಎರಡು-ಮೂರು ಎಕರೆಯಲ್ಲಿಯೇ ವಾರ್ಷಿಕ ೧೦ - ೧೫ ಲಕ್ಷ ಮಾಡಿಕೊಳ್ಳುವ ಪ್ರಗತಿಪರ ರೈತರು. ಒಂದುಕಡೆ ಅತಿವೃಷ್ಟಿ/ಅಕಾಲಿಕ ಮಳೆಯಿಂದ ಬೆಳೆಹಾನಿಯಾದರೆ ಮತ್ತೊಂದು ಕಡೆ ಮಳೆ/ನೀರಿಗಾಗಿ ಕಾದುಕುಳಿತ ಜನ. ಈ ವೈರುಧ್ಯಗಳನ್ನು ಸರಿಮಾಡಲು ಸಾಧ್ಯವಿಲ್ಲವಾದರೂ ಅಂತರವನ್ನು ಖಂಡಿತ ಕಡಿಮೆಗೊಳಿಸಬಹುದು. ಎಲ್ಲವೂ ಸರ್ಕಾರದಿಂದಲೇ ಆಗಬೇಕು ಎಂದಿಲ್ಲ. ಜನಪರ ಕಾಳಜಿ ಹೊಂದಿರುವ ಸಮಾನಮನಸ್ಕ ಅನುಭವೀ ರೈತರು, ಕೃಷಿ ವಿಜ್ಞಾನಿಗಳು ಸಣ್ಣ ಮಟ್ಟದಲ್ಲಿ ಗುಂಪು ಸೇರಿದರೂ ದೊಡ್ಡ ಮಟ್ಟದ ಸಾಧನೆ ಆಗುತ್ತದೆ. ಹನಿಹನಿಗೂಡಿದರೆ ಹಳ್ಳ ಎಂಬಂತೆ ಪ್ರತೀ ಹಳ್ಳಿಯಲ್ಲೂ ಅದು ಪುನರಾವರ್ತನೆಯಾಗಬೇಕು.
ಜಗತ್ತಿನಲ್ಲಿ ಬೆಳೆದ ಮೂರನೇ ಒಂದು ಭಾಗದಷ್ಟು ಆಹಾರ ಪದಾರ್ಥಗಳು ಸರಿಯಾಗಿ ಬಳಕೆಯಾಗದೆ ಹಾಳಾಗುತ್ತಿದೆಯಂತೆ. ಬೆಳೆ ಹೆಚ್ಚಾದ ತಕ್ಷಣ ಹಸಿವು ಮುಕ್ತ ಜಗತ್ತು ಸಾಧ್ಯವಿಲ್ಲ. ಆಹಾರ ಪದಾರ್ಥಗಳ ರಕ್ಷಣೆ, ಪೂರೈಕೆ ಹಾಗು ಬಳಕೆಯಲ್ಲಿ ಸಹ ಶಿಸ್ತು ಸಂಯಮಗಳ ಅಗತ್ಯವಿದೆ.
ನಾವಿಲ್ಲಿ ಹಸಿವಿನ ಬಗ್ಗೆ ಮಾತನಾಡುತ್ತಿದ್ದರೂ ಹಸಿವಿಗೆ ಕಾರಣಗಳಾದ ಬಡತನ, ಪೂರೈಕೆಯಲ್ಲಿನ ವ್ಯತ್ಯಾಸಗಳು ಮುಂತಾದ ಸಮಸ್ಯೆಗಳ ಬಗ್ಗೆಯೂ ಯೋಚಿಸಬೇಕಿದೆ. ಹಸಿವು ಮತ್ತು ಹಸಿವಿಗೆ ಕಾರಣಗಳನ್ನೂ ಗಮನದಲ್ಲಿಟ್ಟುಕೊಂಡು UNO ಸಿದ್ದಪಡಿಸಿರುವ ವಿಶ್ವ ಆಹಾರ ದಿನದ ಈ ವೀಡಿಯೋ ನೋಡಿ.
ಈ ಹಿಂದಿನ ವಿಶ್ವ ಆಹಾರ ದಿನಗಳ ಬಗ್ಗೆ ತಿಳಿಯಿರಿ