Friday, October 16, 2015

ವಿಶ್ವ ಆಹಾರ ದಿನ ೨೦೧೫ - ಹಸಿವುಮುಕ್ತ ಜಗತ್ತು

ವಿಶ್ವ ಆಹಾರ ದಿನದ ಆಚರಣೆ ೧೯೮೧ರಿಂದ ಆಚರಣೆಯಲ್ಲಿದೆ ! ಪ್ರತೀ ವರ್ಷವೂ ಒಂದು ಉದ್ದೇಶ/ಮೂಲ ಅಂಶ(theme)ದೊಂದಿಗೆ ಆಚರಿಸಲಾಗುತ್ತದೆ, ಈ ವರ್ಷದ ಉದ್ದೇಶ "ಒಂದು ಭವಿಷ್ಯ - ಶೂನ್ಯ ಹಸಿವು" (One Future, Zero Hunger). 

ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ ಎಂಬ ಪ್ರಾರ್ಥನೆಯೊಂದಿಗೆ ಊಟವನ್ನು ಪ್ರಸಾದವೆಂದು ಭಾವಿಸುವ ಭಾರತದಲ್ಲಿ ಹಸಿವು - ಇದೆ. ಭಾರತದಲ್ಲಿನ ಹಸಿವಿಗೂ ವಿಶ್ವದಲ್ಲಿನ ಹಸಿವಿಗೂ ಸ್ವಲ್ಪ ವ್ಯತ್ಯಾಸ ಇದೆ ಎನಿಸುತ್ತದೆ. ಭಾರತದಲ್ಲಿ / ಹಿಂದುಳಿದ ದೇಶಗಳಲ್ಲಿ ಹಸಿವಿಗೆ ಕಾರಣ ಬಡತನ. ವಿಶ್ವದಲ್ಲಿ ಕೆಲವು ಕಡೆ ಆಹಾರ ಪದಾರ್ಥಗಳ ಅಭಾವದಿಂದಲೂ ಹಸಿವು ಇದೆ. 

ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಹಾರದ ಕೊರತೆಯನ್ನು ನೀಗಿಸುವಲ್ಲಿ ಹಲವು ಸಂಸ್ಥೆಗಳು, ಸರ್ಕಾರಗಳೂ ಹಲವು ಕಾರ್ಯಕ್ರಮಗಳಡಿಯಲ್ಲಿ ಕೆಲಸ ಮಾಡುತ್ತಿವೆ. ಕರ್ನಾಟಕ ಸರ್ಕಾರದ 'ಅನ್ನಭಾಗ್ಯ' ಹಲವು ಮಕ್ಕಳಿಗೆ ಶಾಲೆಯ ದಾರಿ ತೋರಿಸಿದೆ. ದಕ್ಷಿಣಭಾರತದ ಹಲವು ದೇವಸ್ಥಾನಗಳಲ್ಲಿ ಪ್ರತಿದಿನ ಅನ್ನದಾನ ನಡೆಯುತ್ತದೆ. "ಅಕ್ಷಯಪಾತ್ರ" ಈಗಾಗಲೇ ೧೭ ಕೋಟಿ ಮಕ್ಕಳಿಗೆ ಆಹಾರ ಹಂಚಿದೆ. ಇವುಗಳ ಜೊತೆಗೆ ಎಷ್ಟೋ ಸಂಘ ಸಂಸ್ಥೆಗಳು ತಮ್ಮ ಪರಿಮಿತಿಯಲ್ಲಿಯೇ ಆಹಾರ ಹಂಚಿಕೆ ಮಾಡುತ್ತಿವೆ. 

ಹಸಿವುಮುಕ್ತ ಭಾರತಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ಕೃಷಿಗೆ ಬೆಂಬಲ. ಒಂದು ಕಡೆ ಸಾಲದ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗುವ ರೈತರಿದ್ದರೆ, ಮತ್ತೊಂದು ಕಡೆ ಎರಡು-ಮೂರು ಎಕರೆಯಲ್ಲಿಯೇ ವಾರ್ಷಿಕ ೧೦ - ೧೫ ಲಕ್ಷ ಮಾಡಿಕೊಳ್ಳುವ ಪ್ರಗತಿಪರ ರೈತರು. ಒಂದುಕಡೆ ಅತಿವೃಷ್ಟಿ/ಅಕಾಲಿಕ ಮಳೆಯಿಂದ ಬೆಳೆಹಾನಿಯಾದರೆ ಮತ್ತೊಂದು ಕಡೆ ಮಳೆ/ನೀರಿಗಾಗಿ ಕಾದುಕುಳಿತ ಜನ. ಈ ವೈರುಧ್ಯಗಳನ್ನು ಸರಿಮಾಡಲು ಸಾಧ್ಯವಿಲ್ಲವಾದರೂ ಅಂತರವನ್ನು ಖಂಡಿತ ಕಡಿಮೆಗೊಳಿಸಬಹುದು. ಎಲ್ಲವೂ ಸರ್ಕಾರದಿಂದಲೇ ಆಗಬೇಕು ಎಂದಿಲ್ಲ. ಜನಪರ ಕಾಳಜಿ ಹೊಂದಿರುವ ಸಮಾನಮನಸ್ಕ ಅನುಭವೀ ರೈತರು, ಕೃಷಿ ವಿಜ್ಞಾನಿಗಳು ಸಣ್ಣ ಮಟ್ಟದಲ್ಲಿ ಗುಂಪು ಸೇರಿದರೂ ದೊಡ್ಡ ಮಟ್ಟದ ಸಾಧನೆ ಆಗುತ್ತದೆ. ಹನಿಹನಿಗೂಡಿದರೆ ಹಳ್ಳ ಎಂಬಂತೆ ಪ್ರತೀ ಹಳ್ಳಿಯಲ್ಲೂ ಅದು ಪುನರಾವರ್ತನೆಯಾಗಬೇಕು.
ಜಗತ್ತಿನಲ್ಲಿ ಬೆಳೆದ ಮೂರನೇ ಒಂದು ಭಾಗದಷ್ಟು ಆಹಾರ ಪದಾರ್ಥಗಳು ಸರಿಯಾಗಿ ಬಳಕೆಯಾಗದೆ ಹಾಳಾಗುತ್ತಿದೆಯಂತೆ. ಬೆಳೆ ಹೆಚ್ಚಾದ ತಕ್ಷಣ ಹಸಿವು ಮುಕ್ತ ಜಗತ್ತು ಸಾಧ್ಯವಿಲ್ಲ. ಆಹಾರ ಪದಾರ್ಥಗಳ ರಕ್ಷಣೆ, ಪೂರೈಕೆ ಹಾಗು ಬಳಕೆಯಲ್ಲಿ ಸಹ ಶಿಸ್ತು ಸಂಯಮಗಳ ಅಗತ್ಯವಿದೆ. 

ನಾವಿಲ್ಲಿ ಹಸಿವಿನ ಬಗ್ಗೆ ಮಾತನಾಡುತ್ತಿದ್ದರೂ ಹಸಿವಿಗೆ ಕಾರಣಗಳಾದ ಬಡತನ, ಪೂರೈಕೆಯಲ್ಲಿನ ವ್ಯತ್ಯಾಸಗಳು ಮುಂತಾದ ಸಮಸ್ಯೆಗಳ ಬಗ್ಗೆಯೂ ಯೋಚಿಸಬೇಕಿದೆ. ಹಸಿವು ಮತ್ತು ಹಸಿವಿಗೆ ಕಾರಣಗಳನ್ನೂ ಗಮನದಲ್ಲಿಟ್ಟುಕೊಂಡು UNO ಸಿದ್ದಪಡಿಸಿರುವ ವಿಶ್ವ ಆಹಾರ ದಿನದ ಈ ವೀಡಿಯೋ ನೋಡಿ.
ಈ ಹಿಂದಿನ ವಿಶ್ವ ಆಹಾರ ದಿನಗಳ ಬಗ್ಗೆ ತಿಳಿಯಿರಿ

Sunday, April 5, 2015

ಅಡುಗೆ ಅನಿಲ ಸಬ್ಸಿಡಿ ನಮಗೆ ಅಗತ್ಯವೇ?

ನಮ್ಮ ದೇಶದಲ್ಲಿ ಈಗ್ಗೆ ೧೬ ಕೋಟಿ ಅಡುಗೆ ಅನಿಲ ಸಂಪರ್ಕಗಳಿವೆ. ಎಲ್ಲ ಸಂಪರ್ಕಗಳಿಗೂ ಇದುವರೆಗೂ ಸಬ್ಸಿಡಿ ದರದಲ್ಲೇ ಸಿಲಿಂಡರ್‍ಗಳನ್ನೂ ಪೂರೈಸಲಾಗುತ್ತಿದೆ. ಈಗ ಆ ಸಬ್ಸಿಡಿ ಬ್ಯಾಂಕ್ ಖಾತೆಗಳ ಮೂಲಕ ವಿತರಿಸುವ ಯೋಜನೆ "ಪಹಲ್" ಜಾರಿಗೆ ಬಂತು. ಜೊತೆಯಲ್ಲೇ ಪ್ರಶ್ನೆಗಳು.


ಇಷ್ಟು ವರ್ಷ ಇಲ್ಲದ್ದು ಈಗೇಕೆ? ಹೇಗೂ ಕೊಡುತ್ತಿದ್ದಾರಲ್ಲ, ಮತ್ತೂ ಕೊಡುತ್ತಾರಲ್ಲ ಈ ಬ್ಯಾಂಕ್ ಖಾತೆ ಮೂಲಕ ಕೊಡುವ ಜಂಜಡವೇಕೆ? ಇದರಿಂದ ಸರ್ಕಾರಕ್ಕೆ ಏನು ಸಿಗುತ್ತೆ?
₹ ೨೦೭.೫೯ರಂತೆ ವರ್ಷಕ್ಕೆ ೯ ಸಿಲಿಂಡರ್‍ಗಳಿಗೆ ₹೧,೮೬೮.೩೧ ಆಗುತ್ತದೆ. ೧೬ ಕೋಟಿ ಸಂಪರ್ಕಗಳಿಗೂ ಕೊಟ್ಟರೆ ಸುಮಾರು ₹೨೯,೮೯೩ ಕೋಟಿ ಆಗುತ್ತದೆ. ಎಲ್ಲರೂ ಸಬ್ಸಿಡಿ ಬಳಸಿದರೆ ಸರ್ಕಾರಕ್ಕೆ ಉಳಿಯುವುದೇನೂ ಇಲ್ಲ. ಆದರೆ ಕನಿಷ್ಟ ೧ ಕೋಟಿ ಜನ ಸಬ್ಸಿಡಿ ಬೇಡ ಎಂದರೆ ಉಳಿಯುವ ಹಣ ₹ ೧,೮೬೮ ಕೋಟಿ. ಈ ೧೬ಕೋಟಿ ಸಂಪರ್ಕಗಳಲ್ಲಿ ೮ ಕೋಟಿಗಿಂತ ಹೆಚ್ಚು ಸಂಪರ್ಕಗಳು ನಗರ ಪ್ರದೇಶದಲ್ಲಿವೆ. ಇದರಲ್ಲಿ ಅರ್ಧದಷ್ಟು ಜನ ಸಬ್ಸಿಡಿ ಬಳಸದಿದ್ದರೆ ಉಳಿಯುವ ಹಣ ₹೭,೫೦೦ ಕೋಟಿ.

ಸಬ್ಸಿಡಿ ನಿರಾಕರಿಸಿ ಎಂದು ಬಿಜೆಪಿಯ ನರೇಂದ್ರ ಮೋದಿ ಏಕೆ ಹೇಳಬೇಕು?
ಅಡುಗೆ ಅನಿಲ ಸಬ್ಸಿಡಿ ನಿರಾಕರಿಸುವ ಜನರಿಂದ ಸಂಗ್ರಹವಾಗುವ ಹಣದಿಂದ ನೂರಾರು ಹಳ್ಳಿಗಳಲ್ಲಿರುವ ಹೊಗೆ ಸಹಿತ ಅಡುಗೆ ಮನೆಯನ್ನು ಹೊಗೆ ರಹಿತವಾಗಿ ಮಾಡುತ್ತೇನೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇದು ಅವರು ಪ್ರಧಾನಿಯಾಗಿ ಕೊಟ್ಟಿರುವ ಹೇಳಿಕೆ. ಬಿಜೆಪಿಯ ಮುಖವಾಣಿಯಾಗಿ ಅಲ್ಲ. ಈ ಹೇಳಿಕೆ/ಭರವಸೆಗಳನ್ನು ರಾಜಕೀಯ/ಪಕ್ಷಗಳ ದೃಷ್ಟಿಯಿಂದ ನೋಡಬಾರದು.

ಸಬ್ಸಿಡಿ ಯಾರು ನಿರಾಕರಿಸಬೇಕು?
ಸಂಸದರು, ಐಎಎಸ್‌, ಐಪಿಎಸ್‌, ಐಎಫ್ಎಸ್‌ನಂತಹ ಉನ್ನತ ದರ್ಜೆಯ ಅಧಿಕಾರಿಗಳು, ಶ್ರೀಮಂತ ವರ್ಗದ ಜನರು ಸಿಲಿಂಡರ್‌ ಸಬ್ಸಿಡಿ ಹಿಂತಿರುಗಿಸಿ, ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸುವ ಮನಸ್ಸಿದ್ದ ನಮ್ಮಂತವರೆಲ್ಲಾ ನಿರಾಕರಿಸಬಹುದು.

ಏನ್ ಮಹಾ ದೇಶ ಕಟ್ಟೋದು ಇವರು ನಮ್ಮ್ ದುಡ್ಡಿಂದ ?
ಯಾವುದೇ ಸರ್ಕಾರವಾದರೂ ಸ್ವರ್ಗವನ್ನೇ ಧರೆಗಿಳಿಸಲು ಸಾಧ್ಯವಿಲ್ಲ. ಸ್ವರ್ಗ / ರಾಮರಾಜ್ಯ ಸಾಕಾರವಾಗುವುದು ದೇಶದ ನಾಗರಿಕರು ಕೈಜೋಡಿಸಿದಾಗ ಮಾತ್ರ. ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ ಅಥವಾ ಯಾವುದೇ ಮಹತ್ತರ ಬದಲಾವಣೆ ಸಾದ್ಯವಾಗಿದ್ದು ಜನರಿಂದ. ಸರ್ಕಾರ ಅದನ್ನು ನಿರ್ವಹಿಸುತ್ತದೆ ಅಷ್ಟೆ.


ಯಾಕೆ ನಗರದಲ್ಲಿ ಇರುವವರಿಗೇ ಹೇಳುತ್ತಿದ್ದೀರ ಸಬ್ಸಿಡಿ ಬಿಡೋಕೆ?
ನಗರದಲ್ಲಿರುವ ಜನಕ್ಕೆ ಸಬ್ಸಿಡಿ ಇಲ್ಲದೆಯೂ ಬದುಕುವ ಸಾಮರ್ಥ್ಯ ಖಂಡಿತ ಇದೆ. ಒಂದು ಮೊಬೈಲ್‍ನ ಇಂಟರ್‍ನೆಟ್‌ ಸಂಪರ್ಕ, ಡೇಟಾ ಮುಂತಾದವಕ್ಕೆ ತಿಂಗಳಿಗೆ  ₹೨೦೦ - ೩೦೦ ಖರ್ಚು ಮಾಡುವವರಿಗೆ ಸಬ್ಸಿಡಿ ದುಡ್ಡು ಯಾವ ಲೆಕ್ಕ? ಒಂದು ಸಲ ಸಂಸಾರಸಮೇತ ಹೊರಗೆ ಹೋಗಿ ತಿಂಡಿ ತಿಂದು ಚಲನಚಿತ್ರ ನೋಡಿದರೆ ಆಗುವ ಖರ್ಚು ವಾರ್ಷಿಕ ಸಬ್ಸಿಡಿಗಿಂತ ಹೆಚ್ಚು. ಇದಕ್ಕಿಂತಾ ಕಾರಣ ಬೇಕೆ? 

ಹಳ್ಳಿಯಲ್ಲಿರೋರು ಎಲ್ಲಾ ಬಡವರೇನಾ ? ಅವರೂ ಸಬ್ಸಿಡಿ ಬಿಡಲಿ.
ಹಳ್ಳಿಯಲ್ಲಿರುವವರು ಬಡವರಾ ಶ್ರೀಮಂತರಾ ಎಂಬ ಪ್ರಶ್ನೆಗಿಂತ ನಗರದ ಜನ ಅನುಭವಿಸುತ್ತಿರುವ ಎಷ್ಟು ಸೌಲಭ್ಯ ಸಿಕ್ಕಿದೆ ಎಂದು ಯೋಚಿಸಿ. ನಗರದ ರಸ್ತೆಗಳಿಗೂ ಹಳ್ಳಿ ರಸ್ತೆಗಳಿಗೂ ಹೋಲಿಸಲು ಸಾದ್ಯವೇ? ನಗರಲ್ಲಿರುವ ಸಾರಿಗೆ ವ್ಯವಸ್ಥೆಗೂ ಗ್ರಾಮಾಂತರ ಸಾರಿಗೆಗೂ ಹೋಲಿಕೆ ಸಮಂಜಸವೇ? ಅವರಿಗೂ ನಗರ ಪ್ರದೇಶದಲ್ಲಿರುವ ಎಲ್ಲಾ ಸವಲತ್ತುಗಳನ್ನೂ ಕೊಟ್ಟು ಆಮೇಲೆ ಸಬ್ಸಿಡಿ ಬಿಡಿ ಎಂದು ಕೇಳೋಣ. ಸ್ವಲ್ಪ ನಿಧಾನಿಸಿ.

ಮತ್ತೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಅರ್ಧದಷ್ಟು ಸಂಪರ್ಕಗಳು ನಗರ ಪ್ರದೇಶದಲ್ಲಿವೆ. ನಗರ ಪ್ರದೇಶದಲ್ಲಿರುವ ಮೂರು ಪಟ್ಟು ಜನ ಹಳ್ಳಿಗಳಲ್ಲಿದ್ದಾರೆ. ಆದರೆ ನಗರ ಪ್ರದೇಶದಲ್ಲಿರುವಷ್ಟು ಸಂಪರ್ಕಗಳೇ ಹಳ್ಳಿಗಳಲ್ಲಿ ಇವೆ. ಅಡುಗೆ ಅನಿಲ ಸಂಪರ್ಕಗಳೇ ಆ ಮಟ್ಟಕ್ಕೆ ಅಲ್ಲಿ ವ್ಯಾಪಿಸಿಲ್ಲ. ಯಾವ ಆಧಾರದ ಮೇಲೆ ಅವರನ್ನು ಸಬ್ಸಿಡಿ ಬಿಡಿ ಎಂದು ಕೇಳುವುದು?

ಈವರೆಗೂ ಎಷ್ಟು ಜನ ಸಬ್ಸಿಡಿ ಬಿಟ್ಟಿದ್ದಾರೆ?
(ಏಪ್ರಿಲ್ ೫ರಂದು ಇದ್ದಂತೆ) ಭಾರತ್ ಗ್ಯಾಸ್ - ೩೯೦೨೬, ಹೆಚ್‍ಪಿ  - ೮೭೮೭೬ ಮತ್ತು ಇಂಡೇನ್ - ೧,೯೭,೦೦೦  ಜನ ಈಗಾಗಲೇ ಸಬ್ಸಿಡಿ ಬೇಡವೆಂದು ಘೋಷಿಸಿದ್ದಾರೆ. ಸುಮಾರು ೬೦ಕೋಟಿಗಿಂತ ಹೆಚ್ಚು ಹಣ ಸರ್ಕಾರಕ್ಕೆ ಉಳಿಯುತ್ತದೆ. ಜನಜಾಗೃತಿ ಸಾಲದು. ಅದು ನಮ್ಮಿಂದಲೇ ಆಗಲಿ. 

ಇಷ್ಟೆಲ್ಲಾ ಹೇಳ್ತಿದೀಯಾ, ನೀನು ಬಿಟ್ಟಿದ್ದೀಯಾ ?
ಹೇಳಿದವನೇ ಪಾಲಿಸದಿದ್ದರೆ ಅವನ ಹೇಳಿಕೆಗೆ ನೈತಿಕತೆ ಎಲ್ಲಿ ? ಲಾಲ್ ಬಹದ್ದೂರರು ದೇಶದ ಜನಕ್ಕೆ ಒಂದು ಹೊತ್ತಿನ ಉಪವಾಸಕ್ಕೆ ಕರೆ ಕೊಟ್ಟಿದ್ದಾಗ ಅವರೂ ಅದನ್ನು ಪಾಲಿಸುತ್ತಿದ್ದರು. ಅವರೊಡನೆ ನಾನು ಹೋಲಿಸಿಕೊಳ್ಳುತ್ತಿಲ್ಲ. ನೈತಿಕತೆ ಎಂದರೇನು ಎಂಬುದರ ಬಗ್ಗೆ ಹೇಳಿದೆ ಅಷ್ಟೆ.

ಎಷ್ಟು ಜನ ತಿರಸ್ಕರಿಸಿದ್ದಾರೆ ಎನ್ನುವ ಮಾಹಿತಿಗಳು ಬೇಕಾದರೆ ಇಲ್ಲಿವೆ ನೋಡಿ.


ಸರೀ, ಸರಿ. ಈಗ ಸಬ್ಸಿಡಿ ಬಿಡೋದು ಹೇಗೆ ?
೧. ಸಬ್ಸಿಡಿ ಬೇಡವೆಂದು ಹೇಳುವ ಗ್ರಾಹಕರು ಮೊದಲು http://www.givitup.in/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲಿ ಭಾರತ್ ಗ್ಯಾಸ್, ಎಚ್‌ಪಿ, ಇಂಡಿಯನ್ ಗ್ಯಾಸ್ ಕಂಪನಿಗಳ ಮಾಹಿತಿ ನೀಡಲಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದ ಗ್ರಾಹಕರು ತಮ್ಮ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಗ್ಯಾಸ್ ನಂಬರ್‌ ಅನ್ನು ದಾಖಲು ಮಾಡಬೇಕು.


೨. ಎಸ್‌ಎಂಎಸ್ ಮಾಡುವ ಮೂಲಕವೂ ಜನರು ಸಬ್ಸಿಡಿಯನ್ನು ತಿರಸ್ಕಾರ ಮಾಡಬಹುದು. ಭಾರತ್ ಗ್ಯಾಸ್ ಸಂಪರ್ಕ ಹೊಂದಿರುವವರು GIVEITUP ಎಂದು 7738299899. ಎಚ್‌ಪಿ ಗ್ಯಾಸ್‌ನವರು GIVEITUP ಎಂದು 9766899899. ಇಂಡಿಯನ್ ಗ್ಯಾಸ್‌ನವರು GIVEITUP ಎಂದು 8130792899 ನಂಬರ್‌ಗೆ ನಿಮ್ಮ ನೋಂದಾಯಿತ ಸಂಖ್ಯೆಯಿಂದ ಎಸ್‌ಎಂಎಸ್ ಕಳಿಸಬಹುದು.

೩. ಎಸ್‌ಎಂಎಸ್ ಆನ್‌ಲೈನ್ ಸೇವೆ ಬೇಡ ಎನ್ನುವುದಾದರೆ ನಿಮ್ಮ ಸಿಲಿಂಡರ್ ವಿತರಕರನ್ನು ಭೇಟಿ ಮಾಡಿ ಅರ್ಜಿ ಪಡೆದು ಭರ್ತಿ ಮಾಡಿ ನೀಡಬಹುದು. ಅರ್ಜಿಯಲ್ಲಿ 17 ಸಂಖ್ಯೆಗಳ ನಿಮ್ಮ ಸಿಲಿಂಡರ್ ಸಂಪರ್ಕದ ನಂಬರ್ ಮತ್ತು ಒಂದು ಸಹಿ ಹಾಕಿದರೆ ಸಾಕಾಗುತ್ತದೆ. 

ಸಬ್ಸಿಡಿ ತಿರಸ್ಕರಿಸುವ ಬಗ್ಗೆ ಗೊಂದಲಗಳಿದ್ದರೆ 18002333555 ದೂರವಾಣಿ ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.

ಸಣ್ಣ ಸಣ್ಣದಕ್ಕೂ ತೆರಿಗೆ ಕಟ್ಟುವ ನಾವು ಈ ಪುಟ್ಟ ಸವಲತ್ತನ್ನು ತಿರಸ್ಕರಿಸುವ ಅಗತ್ಯವಿದೆಯೆ? ಸೇವೆಗಾಗಿಯೇ ನಿಂತವರು ಇವನ್ನೆಲ್ಲಾ ತಿರಸ್ಕರಿಸಿಲ್ಲ. 
ಕೆಲವು ಸಚಿವರು ಸಂಸದರು ಈಗಾಗಲೇ ತಿರಸ್ಕರಿಸಿದ್ದಾರೆ. ಸೇವೆಗಾಗಿಯೇ ನಿಂತಿರುವ ಮಂದಿಗಿಂತ ಪ್ರಜೆಗಳೇ ಬಹುಸಂಖ್ಯಾತರು ಅಲ್ಲವೇ? ಕಳೆದ ೩ ದಿನಗಳಲ್ಲಿ ಕರ್ನಾಟಕದಲ್ಲಿ ೨೦ ಸಹಸ್ರ ಮಂದಿ ಸಬ್ಸಿಡಿ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯೂ ಇದೆ. ಹನಿಹನಿಗೂಡಿದರೆ ಹಳ್ಳ. ವಿವೇಚನೆಯಿಂದ ಯೋಚಿಸಿ, ಯಾವ ಗುಂಪಿನಲ್ಲಿ ಸೇರಿಕೊಳ್ಳಬೇಕು ಎಂಬುದನ್ನು ನಿರ್ದರಿಸಿ. 

(ಕುಹುಕ ಪ್ರಶ್ನೆ) ಹೂಂ.. ನಾವೇನೋ ಸಬ್ಸಿಡಿ ಬೇಡ ಅಂತ ಅಂದ್ಬಿಟ್ಟು ಬಿಡ್ತೀವಿ. ಆದರೆ ಅದನ್ನೆಲ್ಲಾ ರಾಜಕೀಯದವರೇ ತಿಂದುಕೊಳ್ತಾರೆ?
ಸರಿ, ರಾಜಕೀಯದವರು ತಿನ್ನಲು ನೀವೇ ಏನಾದರೂ ನೇರವಾಗಿ ಅವರ ಕೈಗೆ ಕೊಡುತ್ತಿದ್ದೀರಾ? ಮತ ಹಾಕಲು ನೀವುಗಳೇ ದುಡ್ಡು ತೆಗೆದುಕೊಳ್ಳುವಾಗ ಹೇಳಿದ ಮಾತು 'ನಮ್ಮ ದುಡ್ಡು ನಮಗೇ ಕೊಡ್ತಾವ್ರೆ' ಎಂದಿದ್ದಿರಿ, ಅದು ಮರೆತು ಹೋಯ್ತೇ?

ಬನ್ನಿ ಕೈಜೋಡಿಸೋಣ

ಉಲ್ಲೇಖಗಳಲ್ಲಿರುವ ದಾಖಲೆಗಳನ್ನೂ ಓದಿ. ಹೆಚ್ಚಿನ ಪ್ರಶ್ನೆಗಳಿದ್ದರೆ ದಯವಿಟ್ಟು ಕಮೆಂಟ್ ಮಾಡಿ. ಉತ್ತರವನ್ನು ಕೊಡುವ ಪ್ರಯತ್ನ ಮಾಡೋಣ. ಸಬ್ಸಿಡಿ ನಿರಾಕರಿಸುವುದನ್ನೂ ಒಂದು ನಾಗರಿಕ ಕರ್ತವ್ಯ ಎಂದು ನನ್ನೊಡನೆ ಕೈಜೋಡಿಸುತ್ತೀರೆಂಬ ವಿಶ್ವಾಸದೊಂದಿಗೆ
- ಹರ್ಷ ದೇವನಹಳ್ಳಿ


ಉಲ್ಲೇಖಗಳು:
1. ಪಹಲ್  2. ಮಾಹಿತಿ ಖಾತೆ  3. 2010ರಲ್ಲಿ ನಡೆದಿದ್ದ ಮೇಳದಲ್ಲಿ ಪ್ರಸ್ತುತಪಡಿಸಿದ ದಾಖಲೆ 4. ಮಾರ್ಚ್ ೨೦೧೪, IISD ದಾಖಲೆ

Saturday, April 4, 2015

ಗ್ರಹಣ ವಿಮೋಚನೆ

ಚಂದ್ರಗ್ರಹಣ ವಿಮೋಚನೆಯಾಯಿತು. 
ಆದರೆ ಪ್ರತಿದಿನ ಮಾನಸಿಕ (ಕೆಲವೊಮ್ಮೆ ದೈಹಿಕ) ಹಿಂಸೆ ಅನುಭವಿಸುತ್ತಿರುವ 'ಅವನಿ'ಗೆ ಚಂದ್ರಕುಮಾರನಿಂದ ಬಿಡುಗಡೆ ಸಿಕ್ಕಿಲ್ಲ ಇಂದೂ ಕೂಡ. ನ್ಯಾಯಾಧೀಶರು ಅವರ ಮೊಕದ್ದಮೆಯನ್ನು ಮುಂದಿನ ಗ್ರಹಣದ ದಿನಕ್ಕೆ ಹಾಕಿದ್ದಾರೆ.
.
.
.
ಅವನಿ = ಭೂಮಿ.
ಭೂಮಿಬಗೆಯುವ ಗಣಿಗಾರಿಕೆ, ಎಲ್ಲೆಲ್ಲೂ ನೀರಿಗಾಗಿ ಗುಂಡಿ ತೋಡುವ ಗುಣಿಗಾರಿಕೆ, ನಮ್ಮ ಜನರಿಗೆ ಉಪಯುಕ್ತವಾಗದ ಕೈಗಾರಿಕೆ... ಮುಂತಾದವುಗಳಿಂದ ಭೂಮಿಗೆ ಮುಕ್ತಿ ಸಿಕ್ಕಾಗ ಮಾತ್ರ ಭೂಮಿಯ ಗ್ರಹಣಮೋಕ್ಷ.

Wednesday, January 28, 2015

ರಾಜಾ ಪ್ರತ್ಯಕ್ಷ ದೇವತಾ

ಇದೇನು ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಗಾಬರಿಪಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತದ ಮೂಲಸ್ಥಾನದಲ್ಲಿರುವವರು ಸರಿಯಾಗಿದ್ದರೆ ಪ್ರಜೆಗಳಿಗೆ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ತಿಳಿಸಲು ಒಂದು ದೃಷ್ಟಾಂತ ಸಿಕ್ಕಿತು. ಅದರ ಬಗ್ಗೆ ಈ ಲೇಖನ. 

ಕರ್ನಲ್ ಜಿ. ಪ್ರತಾಪ್ ರಾಜು (ಮೊಬೈಲ್ ಸಂಖ್ಯೆ +೯೧ ೮೬೦೭೦ ೫೧೩೩೩) ಅವರ ಮಾತುಗಳಲ್ಲೇ ಓದಿ:
"ಇತ್ತೀಚೆಗೆ ನಡೆದ ಎರಡು ಘಟನೆಗಳ ಬಗ್ಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನನ್ನ ತಂದೆ ಐದು ತಿಂಗಳ ಹಿಂದೆ ಅವರ ೯೪ರ ವಯಸ್ಸಿನಲ್ಲಿ ಕಾಲವಾದರು. ನನ್ನ ತಂದೆಯವರು ೧೯೭೫ರಲ್ಲಿ ನಿವೃತ್ತಿ ಹೊಂದಿದರು. ಅವರು ಸೂಪರಿಡೆಂಟ್ ಇಂಜಿನಿಯರ್ ಆಗಿ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರು ಹಾಗೂ ಕೇಂದ್ರ ಸರ್ಕಾರದಿಂದ (ಮಾಸಿಕ ಸುಮಾರು ೪೦ ಸಾವಿರ) ಪಿಂಚಣಿ ಪಡೆಯುತ್ತಿದ್ದರು. ೨೦೧೦ರಲ್ಲಿ ಪಿಂಚಣಿ ಆಯೋಗಕ್ಕೆ ತಮ್ಮ ಪತ್ನಿಯಾದ ಶ್ರೀಮತಿ ಶಾರದಾ (ಈಗ ೮೯ ವರ್ಷ ವಯಸ್ಸು) ಅವರ ಹೆಸರನ್ನು ತಮ್ಮ ನಂತರ ಪಿಂಚಣಿ ಪಡೆಯುವ ಉದ್ದೇಶದಿಂದ ಪಿಂಚಣಿಗೆ ಸೇರಿಸಲು ಅರ್ಜಿ ಸಲ್ಲಿಸಿದರು. ೨೦೧೨ರಲ್ಲಿ ನನ್ನ ತಂದೆ ದೃಷ್ಟಿ ಸಮಸ್ಯೆಗೆ ಒಳಗಾದಾಗ ನಾನು ಮತ್ತೆ ಪಿಂಚಣಿ ಆಯೋಗದೊಂದಿಗೆ ಇ-ಮೇಲ್ ಸಂವಾದ ನಡೆಸಿದರೆ ಸಿಕ್ಕ ಉತ್ತರ 'ಆದಷ್ಟು ಬೇಗ ಆ ಕೆಲಸವನ್ನು ಮುಗಿಸುತ್ತೇವೆ' ಎಂದು. ೨೦೧೪ ಬಂದರೂ ನಮ್ಮ ತಂದೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ, ತಮ್ಮ ಪತ್ನಿಯ ಹೆಸರು ಸೇರ್ಪಡೆಯೂ ಆಗಿರಲಿಲ್ಲ. ಈ ನೋವಿನೊಂದಿಗೇ ನಮ್ಮ ತಂದೆ ನಮ್ಮನ್ನು ಅಗಲಿದರು.
ಇದೇ ವಿಷಯವಾಗಿ ನಮ್ಮ ತಂದೆಯ ಮರಣ ದಾಖಲೆಗಳನ್ನು ತೆಗೆದುಕೊಂಡು ಮತ್ತೆ ನಾನು ಬ್ಯಾಂಕ್‍ಗೆ ಎಡೆತಾಕಿದಾಗ ಸಿಕ್ಕಿದ್ದು ಸಹ ಅದೇ ಉತ್ತರ; ನಿಮ್ಮ ತಾಯಿಯ ಹೆಸರು ಸೇರ್ಪಡೆಯಾಗಿಲ್ಲ. ಬೇಸರದಿಂದಲೇ ೨೦೧೦ರಿಂದ ನಡೆದ ಎಲ್ಲಾ ಸಂವಾದಗಳನ್ನೂ ಒಟ್ಟುಗೂಡಿಸಿ ಪಿಂಚಣಿ ಆಯೋಗಕ್ಕೆ ಕಳುಹಿಸಿದೆ. ಕೇವಲ ನಾಲ್ಕು ದಿನಗಳಲ್ಲೇ 'ಒಂದು ವಾರದಲ್ಲಿ ಈ ದಾಖಲೆಗಳನ್ನು ಒದಗಿಸುತ್ತೇವೆ' ಎಂದು ಆಯೋಗದಿಂದ ಉತ್ತರ ಬಂತು (ಶೀಘ್ರದಲ್ಲಿ ಎನ್ನುವುದಕ್ಕೂ, ಒಂದು ವಾರ ಎನ್ನುವುದಕ್ಕೂ ಎಷ್ಟು ಅಂತರ!!). ಅದಾದ ೫ನೇ ದಿನಕ್ಕೆ ನನಗೆ ಒಂದು ಕರೆ ಬಂತು. ಡಾ॥ ಜಿತೇಂದರ್ ಸಿಂಗ್ ಎಂದು ಪರಿಚಯ ಮಾಡಿಕೊಂಡ ಅವರು 'ನಿಮ್ಮ ತಾಯಿಯವರ ಹೆಸರಿನೊಂದಿಗೆ ಅವಶ್ಯವಾದ ದಾಖಲೆಗಳನ್ನು ಬ್ಯಾಂಕ್‍ಗೆ ಕಳುಹಿಸಲಾಗಿದೆ' ಎಂದು ಹೇಳಿದರು. ಧನ್ಯವಾದದೊಂದಿಗೆ ನಮ್ಮ ದೂರವಾಣಿ ಸಂಭಾಷಣೆ ಮುಗಿಸಿದ ನಂತರ ಡಾ॥ ಜಿತೇಂದರ್ ಸಿಂಗ್ ಯಾರೆಂದು ಹುಡುಕಿದರೆ ಅವರು ಪಿಂಚಣಿ ಆಯೋಗದ ರಾಜ್ಯ ಸಚಿವರು!
ಮೋದಿಯವರ ಸಂಪುಟದಲ್ಲಿ ರಾಜ್ಯ ಸಚಿವರಾದ ಅವರಿಗೆ ಮತ್ತೆ ಕರೆ ಮಾಡಿ ಈ ಬಗ್ಗೆ ಕೇಳಿದರೆ 'ಪ್ರಧಾನಿ ಮೋದಿಯವರಿಂದ ಸಚಿವಾಲಯಕ್ಕೆ ಆದೇಶ ಬಂದಿದೆ. ಯಾವ ಕಾರಣಕ್ಕೂ ಯಾವುದೇ ವಿಧವೆಗೂ ಪಿಂಚಣಿ ದಾಖಲಾತಿಗಳು ಮತ್ತಿತರ ವಿಷಯಗಳಿಂದ ತೊಂದರೆಯಾಗಬಾರದು' ಎಂದು ಸಮಾಧಾನದಿಂದ ಹೇಳಿದರು. 

ಕಳೆದ ತಿಂಗಳು ನಮ್ಮ ತಾಯಿಯವರು ಒಂದು ಪ್ರಮಾಣ ಪತ್ರ (life certificate)ವನ್ನು ಬ್ಯಾಂಕ್‍ಗೆ ಸಲ್ಲಿಸಬೇಕಿತ್ತು. ಬ್ಯಾಂಕ್‍ ಅಧಿಕಾರಿಯೊಬ್ಬರು ನಮ್ಮ ಮನೆಗೇ ಬಂದು ತಾಯಿಯವರ ಸಹಿಯನ್ನು ಪಡೆದರು. (ಕಳೆದ ವರ್ಷ ೯೩ ವಯಸ್ಸಿನ ನಮ್ಮ ತಂದೆಯನ್ನು ತುಂಬಾ ಕಷ್ಟಪಟ್ಟು ಬ್ಯಾಂಕ್ ಬಳಿಗೆ ಕರೆದೊಯ್ದಿದ್ದೆ). ಬ್ಯಾಂಕ್‍ ಅಧಿಕಾರಿ ಸಹ 'ಹಿರಿಯ ನಾಗರಿಕರನ್ನು ಹೆಚ್ಚು ಸೌಜನ್ಯದಿಂದ ನಡೆಸಿಕೊಳ್ಳುವಂತೆ ಹಣಕಾಸು ಮಂತ್ರಾಲಯದಿಂದ ಆದೇಶ ಬಂದಿದೆ' ಎಂದು ಹೇಳಿದರು."

ರಾಜಾ ಪ್ರತ್ಯಕ್ಷ ದೇವತಾ ಎಂಬ ಶೀರ್ಷಿಕೆ ಹೊಂದುತ್ತದೆ ಅಲ್ಲವೇ...

Sunday, January 4, 2015

ಪದಗಳ ಜಾಡು ಹಿಡಿದು... (ಪದ ಕಮ್ಮಟ ೨೦೧೫)

ಭಾಷೆ ಎಂಬುದು ಸಂಸ್ಕೃತಿ. ಸಂಸ್ಕೃತಿಯ ದನಿ ಈ ಪದ. 
ಪದ ಎಂಬುದು ಅರ್ಥವುಳ್ಳ ಧ್ವನಿ. ಪದಗಳಿಂದ ಸಾಲು, ಸಾಲುಗಳಿಂದ ಪದ್ಯ. ಪದಗಳಿಂದ ವಾಕ್ಯ, ವಾಕ್ಯಗಳಿಂದ ಗದ್ಯ ( ಪದ್ಯವಲ್ಲದ್ದು - ಲೇಖನ, ಪಾಠ, ಕಥೆ, ಪ್ರಬಂಧ, ಕಾದಂಬರಿ....). ಪದ ಎಂದರೆ ಹಾಡೂ/ಕವಿತೆಯೂ ಆಗಬಹುದು (ರತ್ನನ್ ಪದಗಳು) . ಪದ ಪದ ಕನ್ನಡ್ ಪದಾನೆ... ನಾ.. ರತ್ನನ್ ಪದ ಕೇಳ್ಕೊಂಡ್ ಬೆಳೆದೋನೆ... 

ಪದಗಳು ಕಾಲಾತೀತವೇ ? ಒಂದು ಪದಕ್ಕೆ ಒಂದು ಭಾಷೆಯಲ್ಲಿ ಮೊದಲಿನಿಂದಲೂ ಒಂದೇ ಅರ್ಥ ಇರುತ್ತದೆಯೇ? ಬದಲಾಗುವ ಸಾದ್ಯತೆಯಂತೂ ಇದೆ. ('ಅಗ್ಗ' ಪದದ ಅರ್ಥ ಹಳಗನ್ನಡ ಕಾಲದಲ್ಲಿ ಶ್ರೇಷ್ಠ, ಹೊಸಗನ್ನಡದಲ್ಲಿ ಅದಕ್ಕೆ ವಿರುದ್ದವಾದ ಅರ್ಥದಲ್ಲಿ ಬಳಕೆಯಾಗುತ್ತಿದೆ) ಕಾಲಾಯ ತಸ್ಮೈ ನಮಃ. ಕಾಲ ಬದಲಾದಂತೆ ಭಾಷೆಗೆ ಹಲವು ಪದಗಳು ಸೇರಿಕೊಳ್ಳಬಹುದು, ಅಂತೆಯೇ ಹಲವು ಪದಗಳು ಬಳಕೆಗೊಳ್ಳದೆ ನರಳಲೂಬಹುದು. ಭಾಷೆಯ ಬೆಳವಣಿಗೆ ಕಾಲಕ್ಕೆ ತಕ್ಕಂತೆ ಹೊಂದಿಕೊಂಡೇ ಹೋಗಬೇಕಾಗಿರುವ ಅನಿವಾರ್ಯ ಎಲ್ಲ ಭಾಷೆಗಳಿಗೂ ಇದೆ. ಹೊಂದಿಕೊಳ್ಳುವ ಗುಣವಿರುವ ಭಾಷೆಗಳು ಉಳಿಯುತ್ತವೆ, ಇಲ್ಲಾ ಕ್ರಮೇಣ ನಶಿಸುತ್ತವೆ. ಭಾಷೆಯ ನಾಶ ಎಂಬುದು ಸಂಸ್ಕೃತಿಯ ನಾಶವೂ ಹೌದು. 

ಹೊಸ ಹೊಸ ಪದಗಳ ಅವಶ್ಯಕತೆ ಬಂದಾಗ ಜನರು/ಪ್ರಾಜ್ಞರು/ತಜ್ಞರು ಒಂದು ಪದವನ್ನು ತರುತ್ತಾರೆ; ಅದು ಮೂಲ ಭಾಷೆಯ ಪದಗಳ ಸಂಕರವಾಗಿರಬಹುದು, ಬೇರೆ ಭಾಷೆಯ ಪದಾನುವಾದವೋ, ಭಾವಾನುವಾದವೋ ಅಥವಾ ಬೇರೆ ಭಾಷೆಯ ಪದವನ್ನೇ ನಮ್ಮ ಭಾಷೆಗೆ ಒಗ್ಗಿಸಿಕೊಳ್ಳುವುದೋ ಆಗಿರಬಹುದು. ಆ ಪದವನ್ನು ಎಲ್ಲರೂ ಬಳಸಿದಾಗ ಮಾತ್ರ ಆ ಪದಕ್ಕೆ ಆಯಸ್ಸು. ಈ ರೀತಿಯ ಕಾರ್ಯ ಚಟುವಟಿಕೆಗಳಿಗಾಗಿ (೨೦೧೨ ಮಾರ್ಚ್ ೧೮ರಂದು) ಹುಟ್ಟಿದ್ದು ಪದಾರ್ಥ ಚಿಂತಾಮಣಿ ಎಂಬ ಫೇಸ್‌ಬುಕ್ ಬಳಗ. 

ಪದಾರ್ಥ ಚಿಂತಾಮಣಿ (ಪಚಿಂ) ಬಳಗದಲ್ಲಿ ಕನ್ನಡದ ಯಾವುದೇ ಪ್ರದೇಶದ ಒಂದು ಪದವನ್ನು ಉಲ್ಲೇಖಿಸಿದರೂ ಆ ಪದದ ವ್ಯುತ್ಪತ್ತಿ, ವಿಸ್ತಾರ ಮತ್ತು ಪರಿಮಿತಿಗಳನ್ನು ಸುದೀರ್ಘವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿ ಹೇಳುವ ಕಾರ್ಯದಲ್ಲಿ ಅನೇಕ ಪರಿಣತರು ಪಚಿಂ ಬಳಗದಲ್ಲಿದ್ದಾರೆ. ಸುಮಾರು 5000 ಸದಸ್ಯರಿರುವ ಈ ಬಳಗದಲ್ಲಿ ಕಾಡುಹರಟೆ / ನಗೆಹನಿ / ರಾಜಕೀಯ / ಅನಗತ್ಯ ಚಿತ್ರಿಕೆಗಳು / ದರ್ಶಿಕೆಗಳು ಇವುಗಳಿಗೆ ಪ್ರವೇಶವಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ಈ ಬಳಗ ಬದುಕಿದೆ ಎಂದರೆ ಅದು ಅದರ ಅಂತಃಸತ್ವದಿಂದ ಮಾತ್ರ. ಇಂತಹ ಒಂದು ಬಳಗದಲ್ಲಿ ಒಬ್ಬರಾಗಿರಲು ನಾವು ಹೆಮ್ಮೆ ಪಡಬೇಕು. 

ಪದ ಕಮ್ಮಟ
ಪಚಿಂ ಬಳಗದಿಂದ ಆಯೋಜನೆಗೊಂಡ ಪ್ರಪ್ರಥಮ ಕಾರ್ಯಕ್ರಮ ಪದ ಕಮ್ಮಟ. ೨೦೧೫ರ ಜನವರಿ ೪ರಂದು ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆದ ಪದಕಮ್ಮಟಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಗಣ್ಯರು, ಅಭಿಮಾನಿಗಳು, ಪ್ರೇಕ್ಷಕರು ಸುಮಾರು ಸಂಖ್ಯೆಯಲ್ಲಿ ಭಾಗವಹಿಸಿ ಪದಕಮ್ಮಟದ ಅನುಭವ ತಮ್ಮದಾಗಿಸಿಕೊಂಡರು. ಮರೆತಿದ್ದೆ, ವಿದೇಶದಿಂದಲೂ ಈ ಕಮ್ಮಟಕ್ಕೆ ಬಂದಿದ್ದರು. 
ಉದ್ಘಾಟನಾ ಸಮಾರಂಭ:
ಎಲ್ಲಾ ಕಾರ್ಯಕ್ರಮಗಳಂತೆ ಇಲ್ಲಿಯೂ ಪ್ರಾರ್ಥನೆಯಿಂದ ಪ್ರಾರಂಭ. ಉಷಾ ಉಮೇಶ್ ದನಿಯಲ್ಲಿ ವಿಘ್ನೇಶ್ವರನಿಗೆ ಪ್ರಥಮ ಪ್ರಣಾಮ ಸಂದಿತು.
ಆಜಾದ್ ಐ.ಎಸ್ ಅವರಿಂದ ಸ್ವಾಗತ ಭಾಷಣ, ಮಂಜುನಾಥ್ ಕೊಳ್ಳೇಗಾಲ ಅವರಿಂದ ಪಚಿಂ ನಡೆದು ಬಂದ ಹಾದಿಯ ಸಂಕ್ಷಿಪ್ತ ವಿವರಣೆಯ ನಂತರ ಪದಕಮ್ಮಟವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಪದಕಮ್ಮಟದ ಉದ್ಘಾಟನೆ ಪದಜೀವಿ ಎಂದೇ ಪರಿಚಿತರಾಗಿರುವ ಜಿ. ವೆಂಕಟಸುಬ್ಬಯ್ಯನವರಿಂದ.

ಉದ್ಘಾಟನೆಯ ನಂತರ ಪದಜೀವಿಯಿಂದ ಕಿರು ಉಪನ್ಯಾಸ. ತಮ್ಮ ಕಿರು ಉಪನ್ಯಾಸದಲ್ಲಿ ಕನ್ನಡದ ಈಗಿನ ಸ್ಥಾನಮಾನ, ಪದಗಳ ಅವಶ್ಯಕತೆ, ಪದ ನಿರ್ಮಾಣದಲ್ಲಿರಬೇಕಾದ ಎಚ್ಚರಿಕೆ, ಹೊಸ ಪದದ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ವಿವರಿಸಿ ನಮ್ಮ ಮನವನ್ನು ಆವರಿಸಿಕೊಂಡರು.
ಪದಜೀವಿಯ ನುಡಿಗಳು:
ಪದಾರ್ಥ ಚಿಂತಾಮಣಿ ಎಂಬ ಶಬ್ದವನ್ನು ಲಾಂಗೂಲಾಚಾರ್ಯರು ಉಪಯೋಗಿಸಿದ್ದಾರೆ.
ಕಮ್ಮಟ = ಕರ್ಮಸ್ಥಾನ . ಕರ್ಮಠಾಣ (ಪ್ರಾಕೃತ್),  ಕಮ್ಮಠ್ (ತಮಿಳು), ಕಮ್ಮಟ (ಮಲಯಾಳ).
ಸುಮಾರು ೭೦೦೦ ಭಾಷೆಗಳಿವೆ, ೪೦೦ ಭಾಷೆಗಳು ಸತ್ತಿವೆ, ೬೭೦೦ ಭಾಷೆಗಳಿರಬಹುದು. ಎಷ್ಟು ಜನ ಅದನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವ ಆಧಾರದ ಮೇಲೆ ಕನ್ನಡಕ್ಕೆ ಇಲ್ಲಿ ೩೦ನೇ ಸ್ಥಾನ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ. ೨೦ ಮಾತ್ರ. ಹೀಗಿರುವುದರಿಂದ ಕನ್ನಡ ಭಾಷೆ ಎಂದೆಂದೂ ಉಳಿಯುವಂಥ ಭಾಷೆ, ಹಾಗೂ ಅದನ್ನು ಬೆಳೆಸಬೇಕಾದ ಅಗತ್ಯ ಉಂಟು.
೩೦ ವರ್ಷಕ್ಕೆ ಒಂದು ಸಲ ಭಾಷೆ ತುಂಬಾ ಬದಲಾವಣೆಯಾಗುತ್ತಾ ಹೋಗುತ್ತದೆ. ೨೦೦೦ ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಕನ್ನಡ. ಮೊದಲನೆಯ (ಹಲ್ಮಿಡಿ) ಶಾಸನ ಕ್ರಿ.ಶ. ೪೫೦ಕ್ಕೆ ಸೇರುತ್ತದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಹೀಗೆ ಬೇರೆ ಬೇರೆ ರೀತಿಯಲ್ಲಿ ಬೆಳೆದು ಬಂದಿದೆ. ಹೊಸಗನ್ನಡ ಬಂದು ಸುಮಾರು ೨೦೦ ವರ್ಷಗಳಾಗಿರಬಹುದು. ಈಗಿನ ಭಾಷೆಯನ್ನು ಆಧುನಿಕ ಕನ್ನಡ ಎಂದು ಕರೆಯಬಹುದು. ಕನ್ನಡ ಬೆಳೆದು ಬಂದಿರುವ ಸಮಯದಲ್ಲೇ ಶಬ್ದಗಳು ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬಂದಿವೆ. ಉದಾಹರಣೆಗೆ 'ಬಂತು' ಪದ, 'ಬಂದಿತು' ವ್ಯಾಕರಣ ಬದ್ಧ ಪದ. ಆದರೆ ಬಂತು ಎನ್ನುವ ಪದವನ್ನೇ ನಾವು ಬಳಸುತ್ತಿದ್ದೇವೆ. ಕಂಪ್ಯೂಟರ್ ಪ್ರಪಂಚದಲ್ಲಿ ಹೊಸ ಪದಗಳನ್ನು ನಿರ್ಮಾಣ ಮಾಡುತ್ತಿದ್ದೀರಿ. ಕೆಲವು ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಒಂದು ಪದಕ್ಕೆ ಎಂಟು ಹತ್ತು ಹತ್ತಿರದ ಅರ್ಥಗಳಿರುತ್ತವೆ. ಯಾವುದನ್ನು ಆರಿಸುತ್ತೀರಿ ಎಂಬುದನ್ನು ಎಚ್ಚರಿಕೆವಹಿಸಿ ಮಾಡಬೇಕಾಗುತ್ತದೆ.
ಅರ್ಥ ಹೇಗೆ ಹೆಚ್ಚಾಗುತ್ತದೆ ಎಂಬುದಕ್ಕೆ ಉದಾಹರಣೆ ನೋಡೋಣ. ಕನ್ನಡದಲ್ಲಿ ಮಾಡು, ಹೇಳು, ಹಾಕು, ಬಿಡು ಈ ರೀತಿಯ ಕೆಲವು ಪದಗಳಿವೆ. ಈ ಪದಗಳಿಗೆ ಹಿಂದೆ ನಾಮಪದ ಸೇರಿಸಿ ಉಪಯೋಗಿಸಿದರೆ ಎಷ್ಟು ಅರ್ಥ ಬದಲಾವಣೆ ಆಗುತ್ತದೆ ಎನ್ನುವುದು ಆಶ್ಚರ್ಯವಾಗುತ್ತದೆ. ತೆಗಿ ಎಂಬ ಶಬ್ದದಿಂದ ಪುಸ್ತಕತೆಗಿ, ಬಾಯಿತೆಗಿ, ಕಣ್ಣುತೆಗಿ, ಸೀರೆತೆಗಿ. ಹಾಗೆಯೇ "ನಾನು ಊಟ ಮಾಡ್ತೀನಿ ನೀನು ತಿಂಡಿ ಮಾಡು" ವ್ಯತ್ಯಾಸ ಗಮನಿಸಿ. ಶಬ್ದಗಳ ಅರ್ಥವ್ಯತ್ಯಾಸ ಹೊಂದುವುದರಿಂದ ಎಚ್ಚರಿಕೆವಹಿಸಬೇಕು.
ಈ ೨೦ ವರ್ಷಗಳಲ್ಲಿ ಎಷ್ಟು ವ್ಯಾಕರಣ ವಿರುದ್ಧವಾಗಿ ಪದಗಳ ನಿರ್ಮಾಣ ಆಗುತ್ತಿದೆ ಎಂದರೆ ಆಶ್ಚರ್ಯ ಆಗಬಹುದು. ಸಂಸ್ಕೃತ ಮತ್ತು ಕನ್ನಡದ ಶಬ್ದಗಳನ್ನು  ಸಾಮಾನ್ಯವಾಗಿ ಸೇರಿಸಲು ಆಗುವುದಿಲ್ಲ. ಆದರೆ ಅದು ಸೇರಿಸುತ್ತಿದ್ದಾರೆ. ಕೋಟ್ಯಂತರ, ಕೋಟ್ಯಾಂತರ. ಜಾತ್ಯತೀತ ಜಾತ್ಯಾತೀತ ಆಗಿದೆ. ಈಗ ಆಡುಮಾತಿನ ರೀತಿಯನ್ನು ಬರವಣಿಗೆಗೆ ಉಪಯೋಗ ಮಾಡುತ್ತಿದ್ದಾರೆ. ಮಾಡುವುದಿಲ್ಲ = ಮಾಡೋಲ್ಲ. ಬರೋಲ್ಲ, ಹೇಳೋಲ್ಲ, ... ಈ ರೀತಿಯ ಶಬ್ದಗಳು ಉಪಯೋಗಕ್ಕೆ ಬಂದಷ್ಟೂ ಹಾಗೆಯೇ ನಿಂತುಬಿಡುತ್ತವೆ. ಆದ್ದರಿಂದ ನೀವು ಮಾಡುತ್ತಿರುವ ಕೆಲಸ ತುಂಬಾ ಅಗತ್ಯವಾದ ಕೆಲಸ.
ಬೆಳೆಯುತ್ತಾ ಇರುವ ಕನ್ನಡವನ್ನು ಬೆಳೆಸುವ ಶಕ್ತಿ ನಿಮ್ಮ ಗುಂಪಿಗೆ ಇದೆ. ನೀವು ೫೦೦೦ ಜನ ಸೇರಿ ಒಂದು ಶಬ್ದವನ್ನು ಉಪಯೋಗ ಮಾಡಿದರೆ ಆ ಶಬ್ದ ಉಳಿದುಕೊಳ್ಳುತ್ತೆ. ಹಾಗಿಲ್ಲದೆ ಕೇವಲ ಕೆಲವು ಮಂದಿ ಉಪಯೋಗಿಸಿದರೆ ಅದು ಉಳಿಯುವುದಿಲ್ಲ. ಆದ್ದರಿಂದ ಗುಂಪಿನಲ್ಲಿ ಯಾವ ಶಬ್ದವನ್ನು ನಿರ್ಮಾಣ ಮಾಡುವಿರೋ ಆ ಪದ ನಿಲ್ಲತಕ್ಕದ್ದು. ಸಾಹಿತಿಗಳು ಕೂಡ ಅದನ್ನು ಉಪಯೋಗಿಸುತ್ತಾರೆ. ಮೌಸ್, ಫ್ಲೈಟ್ ಇಂಥಾ ಶಬ್ದಗಳೆಲ್ಲಾ ಉಳಿದುಕೊಂಡಿರುವಂತೆ ನೀವು ನಿರ್ಮಿಸಿದ ಪದಗಳೂ ಉಳಿಯುತ್ತವೆ. ಅದಕ್ಕೆ ಬೇಕಾದ್ದು ಎಲ್ಲರೂ ಒಂದೇ ಪದವನ್ನು ಉಪಯೋಗಿಸಬೇಕು. ನಿಮ್ಮಿಂದ ನಿರ್ಮಿತವಾದ ಒಂದು ಪದ ಬೇರೆ ಭಾಷೆಗಳಲ್ಲೂ ಬಳಕೆಯಾದರೆ ಪ್ರಪಂಚಕ್ಕೇ ಒಂದು ಪದ ನೀಡಿದ ಹಾಗೆ ಆಗುತ್ತದೆ. ಇದೊಂದು ಸ್ಮರಣೀಯ ಕಾರ್ಯ, ನಿಮಗೆಲ್ಲಾ ಯಶಸ್ಸು ಸಿಗಲಿ.

ಪದಕಮ್ಮಟದ ಸ್ಮರಣ ಸಂಚಿಕೆಯಾದ ಪದ ಸಂಸ್ಮರಣದ ಬಿಡುಗಡೆಯಾದದ್ದು ವಿಶೇಷ. ಕಾರ್ಯಕ್ರಮದಲ್ಲಿಯೇ ಸ್ಮರಣ ಸಂಚಿಕೆಯನ್ನು ಹೊರತಂದಿರುವುದು ಬಹುಶಃ ಫೇಸ್‌ಬುಕ್ ಬಳಗಗಳಲ್ಲೇ ಮೊದಲು. (ಸಂವಾದ / ಕಾರ್ಯಕ್ರಮಗಳು ಏರ್ಪಡುತ್ತವೆ ಆದರೆ ಯಾವುದೇ ಸ್ಮರಣ ಸಂಚಿಕೆಗಳು ಅಂದೇ ಬಿಡುಗಡೆಯಾಗಿದ್ದು ನನಗೆ ತಿಳಿದಿಲ್ಲ; ಸಾಮಾನ್ಯವಾಗಿ ಹೇಳುವುದು 'ಈ ಕಾರ್ಯಕ್ರಮದಲ್ಲಿ ಚರ್ಚಿತ ವಿಷಯಗಳನ್ನು ಒಂದು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಿದ್ದೇವೆ' ಎಂದು, ಈ ರೀತಿಯ ಯಾವ ಪುಸ್ತಕಗಳೂ ನನಗೆ ನೆನಪಿಲ್ಲ). ಸಂಚಿಕೆಯ ಸಂಪಾದಕರಾದ ಮಂಜುನಾಥ್ ಕೊಳ್ಳೇಗಾಲ ಅವರಿಂದ ಸ್ಮರಣ ಸಂಚಿಕೆಯ ಬಗ್ಗೆ ಕಿರು ಮಾಹಿತಿಯೂ ಲಭ್ಯವಾಯಿತು.

ಮಂಗಳೂರು ಆಕಾಶವಾಣಿಯಲ್ಲಿ ಸಹನಿರ್ದೇಶಕರಾಗಿರುವ ಡಾ॥ ವಸಂತಕುಮಾರ ಪೆರ್ಲರವರು ತಮ್ಮ ಅಧ್ಯಕ್ಷರ ಭಾಷಣದಲ್ಲಿ ಭಾಷೆಯ ಇತಿಹಾಸ, ಅವುಗಳ ಉಳಿವು, ಪರಿಮಿತಿಗಳು ಹಾಗೂ ಆ ಪರಿಮಿತಿಗಳನ್ನು ದಾಟುವ ಬಗೆಗಳನ್ನು ಅದ್ಭುತವಾಗಿ ವಿವರಿಸಿದರು.
ಕನ್ನಡ ಭಾಷೆ ದ್ರಾವಿಡ ಭಾಷೆಯ ಒಂದು ಟಿಸಿಲು. ಮೂಲ ದ್ರಾವಿಡ ಭಾಷೆಯಿಂದ ೨೬ ಭಾಷೆಗಳು ಹುಟ್ಟಿವೆ, ಒಂದು ದ್ರಾವಿಡ ಭಾಷೆ ಅಫ್ಘಾನಿಸ್ತಾನದಲ್ಲಿ ಇರುವುದು ದಿಗ್ಭ್ರಮೆಯನ್ನುಂಟುಮಾಡುತ್ತದೆ. ಆದರೆ ಈ ೨೬ ಭಾಷೆಗಳಲ್ಲಿ ಪಂಚದ್ರಾವಿಡ ಭಾಷೆಗಳು ಮಾತ್ರ ಪ್ರಾಮುಖ್ಯವನ್ನು ಉಳಿಸಿಕೊಂಡಿವೆ, ಅದಕ್ಕೆ ಮೂಲ ಕಾರಣ ಆ ಭಾಷೆಗಳು ಮೂಲ ದ್ರಾವಿಡ ಭಾಷೆಯೊಂದಿಗಿನ ಜೊತೆ ಉಳಿಸಿಕೊಂಡ ಸಾತತ್ಯ (continuity). ಮೂಲ ದ್ರಾವಿಡ ಭಾಷೆಯ ಮೊದಲ ಟಿಸಿಲು ತಮಿಳು, ನಂತರ ತುಳು, ಆ ನಂತರ ಕನ್ನಡ, ತೆಲುಗು ಮತ್ತು ಮಲಯಾಳಂ. ಭಾಷೆಗಳ ಉಳಿವಿಗೆ ಪ್ರಭಾವ ಪ್ರೇರಣೆಗಳು ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ. ಅದು ಆಡಳಿತದ ಕಾರಣಗಳಿರಬಹುದು, ವ್ಯಾಪಾರ, ವಾಣಿಜ್ಯ ಕಾರಣಗಳಿರಬಹುದು, ಹೆಚ್ಚು ಸಂಪರ್ಕ ಯಾವುದರ ಜೊತೆಗೆ ಇರುತ್ತವೋ ಅಂಥ ಪದಗಳು ಸ್ವೀಕಾರವಾಗುತ್ತವೆ.
ಭಾಷೆ ಒಂದು ಹರಿಯುವ ನದಿ ಇದ್ದಂತೆ.  ಪ್ರೊ. ಜಿ. ವೆಂಕಟಸುಬ್ಬಯ್ಯನವರು ಹೇಳಿದಂತೆ ಪ್ರತೀ ೩೦ ವರ್ಷಕ್ಕೆ ಭಾಷೆಯ ಸ್ವರೂಪ ಬದಲಾಗುತ್ತದೆ. ೩೦ ವರ್ಷ ಎನ್ನುವುದು ಒಂದು ತಲೆಮಾರಿನ ವಯೋಮಾನ. ಈ ಭಾಷಾ ನದಿ ತಿರುವು ಪಡೆದುಕೊಳ್ಳಬೇಕಾದರೆ ಕಾಲ, ಜನ ಸಮೂಹ, ಇತರ ಪ್ರಭಾವಗಳು ಮತ್ತು ಪ್ರೇರಣೆಗಳು ಕಾರಣವಾಗುತ್ತವೆ. ಭಾಷೆಯ ಸ್ವರೂಪ (form) ಸಹ ಬದಲಾಗುವುದೂ ಸಾದ್ಯ. ಷಟ್ಪದಿಗಳಿದ್ದಂತೆ ಚಂಪೂ ಕಾವ್ಯವಿಲ್ಲ. ಚಂಪೂ ಪ್ರಕಾರದಲ್ಲಿ ಗದ್ಯ ಪದ್ಯಗಳು ಮಿಶ್ರಣವಿತ್ತು. ವಚನಗಳು ಆಡುಭಾಷೆಯ ಪದಗಳನ್ನು ಹೊಂದಿದ್ದವು. ಸುಮಾರು ೧೫೦ - ೧೭೫ ವರ್ಷಗಳ ಕಾಲ ಕತ್ತಲೆಯ ಯುಗ. ದೇಶೀಯ ಭಾಷೆಗಳೆಲ್ಲ ಅಪ್ರಜ್ಞಾವಸ್ಥೆ ತಲುಪಿದ್ದು ಭಾರತ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಕಾಲವದು. ಈ ಅವಧಿಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಭಾಷೆಯ ಮಟ್ಟಿಗೆ ಆಗಲಿಲ್ಲ. ಜನಜೀವನ ಎಲ್ಲಕ್ಕೂ ಮೇಲೆ ಇರುವಂತದ್ದು. ಅದನ್ನು ನಿಯಂತ್ರಿಸುವ ಶಕ್ತಿ ರಾಜಕೀಯ ವ್ಯವಸ್ಥೆ ಹೊಂದಿರುತ್ತದೆ. ಜನಜೀವನ ಮತ್ತು ರಾಜಕೀಯ ವ್ಯವಸ್ಥೆಗಳ ಪ್ರಭಾವದಿಂದ ಭಾಷೆಯ ಸ್ವರೂಪದಲ್ಲಿ (form), ವಸ್ತು(content)ವಿನಲ್ಲಿ, ಹೇಳುವ ವಿಧಾನ(ಶೈಲಿ)ಯಲ್ಲಿ ಬದಲಾವಣೆಯನ್ನು ಕಂಡಿರುವುದನ್ನು ನಾವು ಹೊಸಗನ್ನಡದಲ್ಲಿ ಕಾಣಬಹುದು.
ಕನ್ನಡ ಭಾಷೆಯನ್ನು ಶಾಸ್ತ್ರೀಯಭಾಷೆಯಂತೆ ಅಧ್ಯಯನ ಮಾಡಬೇಕಾದ ಅವಶ್ಯಕತೆ ಈಗ ಇದೆ. ಇದಕ್ಕೆ ಕಾರಣ ಪರಂಪರೆಯ ಜೊತೆ ಸಾತತ್ಯವನ್ನು ಕಳೆದುಕೊಂಡಿರುವುದು. ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಧರಿಸಲಾಗುವುದಿಲ್ಲ. ಕನ್ನಡ ಭಾಷೆಯನ್ನು ಪೂರ್ಣವಾಗಿ ಅರಿಯಲು,  ಪದಗಳ ವ್ಯುತ್ಪತ್ತಿ, ಅರ್ಥ ವಿಂಗಡಣೆ ಮತ್ತು ಬಳಕೆಯ ಸಂದರ್ಭ ಇವು ಅತ್ಯಗತ್ಯ. ಈ ರೀತಿಯ ಪದವಿಶ್ಲೇಷಣೆ ಕೆಲಸವನ್ನು ಮಾಡುತ್ತಿರುವ ಶಿಸ್ತಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಪದಾರ್ಥ ಚಿಂತಾಮಣಿ ಕಾರ್ಯ ಶ್ಲಾಘನೀಯ. ಸುಮಾರು ೫೦೦೦ ಸದಸ್ಯರಿದ್ದರೆ ಪಚಿಂನ ಗಮನಿಸುವವರು ಸುಮಾರು ೫೦ ಸಾವಿರವಿರುತ್ತಾರೆ. ಬೆಂಗಳೂರಿನಲ್ಲಿಯೇ ಪಚಿಂನ ಮೊದಲ ಕಾರ್ಯಕ್ರಮ ನಿಗದಿಪಡಿಸಲು ಕೆಲವು ಕಾರಣಗಳುಃ ರಾಜ್ಯದ ರಾಜಧಾನಿ, ಹೆಚ್ಚು ಜನ ಸದಸ್ಯರು ಬೆಂಗಳೂರಿನವರು, ಪಚಿಂನ ಮೊದಲ ಹೆಜ್ಜೆ ಜನಬಲದಿಂದ ಕೂಡಿರಬೇಕಾದ್ದು, ಕಾರ್ಯಕ್ರಮಕ್ಕೆ ಬೇಕಾದ ಧನಬಲವನ್ನು ಕ್ರೋಢೀಕರಿಸುವ ಸಾಮರ್ಥ್ಯ.
ಕನ್ನಡಿಗರು ಇಂದು ಯಾವುದೇ ರೀತಿಯ ಸಕಾರಾತ್ಮಕ ಅಂಶಗಳನ್ನು ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಸಕಾರಾತ್ಮಕ ಭಾವನೆಗಳನ್ನು ಕನ್ನಡಿಗರು ಬೆಳೆಸಿಕೊಳ್ಳುವುದರಿಂದ ಕನ್ನಡಿಗರ ಗೆಲುವು. ಕೇವಲ ಕಾಲಾಳುವಾಗಿ ಸೈನ್ಯಕ್ಕೆ ಸೇರಿದ ಅನಕ್ಷರಸ್ಥ ಹೈದರಾಲಿ ಮುಂದೆ ಸೇನಾಧಿಕಾರಿಯಾಗಿ ಬೆಳೆಯುತ್ತಾನೆ. ಶಿಕ್ಷಣ ಮುಖ್ಯವಲ್ಲ, ವಿಷಯಪರ ಜ್ಞಾನ ಮುಖ್ಯ. ಈ ರೀತಿಯ ಆತ್ಮವಿಶ್ವಾಸ ಕನ್ನಡಿಗರು ಹೊಂದಬೇಕು. ಕಾವೇರಿಯಿಂದ ಗೋದಾವರಿಯವರೆಗೆ ಮಾತ್ರ ಕನ್ನಡಿಗರು ಸೀಮಿತವಾಗಿಲ್ಲ. ಅಂತರಜಾಲದ ಮುಖಾಂತರ ಕನ್ನಡಿಗರು ವಿಶ್ವದಾದ್ಯಂತ ಹರಡಿಕೊಂಡಿದ್ದೇವೆ. ಇಡೀ ಪ್ರಪಂಚವೇ ಕನ್ನಡ ಸಂಸ್ಕೃತಿಗೆ, ಕನ್ನಡ ಭಾಷೆಗೆ ಸೀಮಾರೇಖೆ. ಕನ್ನಡಕ್ಕೆ ಖಂಡಿತವಾಗಿ ಕನ್ನಡಿಗರು ಮರುಹುಟ್ಟನ್ನು ನೀಡುವ ಸಾಮರ್ಥ್ಯವಿದೆ. ಅಂತರಜಾಲದಲ್ಲಿ ಕನ್ನಡಿಗರು ಕನ್ನಡದ ಕೆಲಸ ಮಾಡುತ್ತಾ ಕನ್ನಡದ ಅಂತಃಸತ್ವವನ್ನು ಕಾಪಾಡಿಕೊಳ್ಳಬೇಕು.
ಕನ್ನಡಿಗರು ತಮ್ಮ ಬೇರಿನ ಜೊತೆ ಸಂಬಂಧವನ್ನು ಕಡಿದುಕೊಳ್ಳಬಾರದು. ಆಚಾರದಂತೆ ವಿಚಾರ. ಆಚಾರ ಬಾಹ್ಯಕ್ಕೆ ಸಂಬಂಧಿಸಿದ್ದು, ವಿಚಾರ ಅಂತರಂಗಕ್ಕೆ ಸಂಬಂದಿಸಿದ್ದು. ಎರಡೂ ಜೊತೆಯಾಗಿಯೇ ಇರಬೇಕು. ವಿಚಾರವಿಲ್ಲದ ಆಚಾರಕ್ಕೆ ಅರ್ಥವಿಲ್ಲ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ನಡೆ-ನುಡಿ, ವೇಷಭೂಷಣ ಇರಬೇಕು. ನಾವು ಆಚರಿಸಿಕೊಂಡೇ ನಮ್ಮ ಮುಂದಿನ ತಲೆಮಾರಿಗೆ ಅದನ್ನು ಹೇಳಿಕೊಡಬೇಕು. ಈ ಎಲ್ಲಾ ಕಾರ್ಯಕ್ಕೂ ಅಂತರಜಾಲ ಅತ್ಯಂತ ಪ್ರಶಸ್ತವಾದ ಶಸ್ತ್ರವಾಗಿ ನಮಗೆ ಒದಗಿ ಬಂದಿದೆ.

ರೂಪ ಸತೀಶ್ ಅವರಿಂದ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಸಮಾರಂಭ ಅಂತ್ಯಗೊಂಡು, ತಜ್ಞರ ಉಪನ್ಯಾಸಕ್ಕೆ ದಾರಿ ಮಾಡಿಕೊಟ್ಟಿತು.

ಪದ ಕಮ್ಮಟದ ಆಶಯ ಕಾರ್ಯಕ್ರಮಕ್ಕೂ ಮೊದಲೇ ನಿರ್ಧಾರಿತವಾಗಿತ್ತು. ಪ್ರಧಾನ ಸಮಿತಿ ಹಾಗೂ ಉಪ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಕಣ್ಣಿಗೆ ಕಟ್ಟುವಂತಿದ್ದು ಒಂದು ದಿನದ ಕಮ್ಮಟ ಯಶಸ್ವಿಗೊಳ್ಳಲು ಸಾಧ್ಯವಾಯಿತು.

ಚಿತ್ರಕೃಪೆ: ರಾಘವ್ ಶರ್ಮ.
ನಿರೀಕ್ಷಿಸಿ: ತಜ್ಞರ ಉಪನ್ಯಾಸಗಳು
------------------------------------------------------------------------------------------------------------
ಪ್ರೊ. ಜಿ. ವೆಂಕಟಸುಬ್ಬಯ್ಯನವರ ಉದ್ಘಾಟನಾ ಭಾಷಣ:
https://drive.google.com/file/d/0ByHVzg8bxD6xbEd2UVpVaFpIMkk/view?usp=sharing
ಡಾ॥ ವಿನೋದ್ ಕುಮಾರ್ ಪೆರ್ಲ ಅವರ ಅಧ್ಯಕ್ಷ ಭಾಷಣ:
https://drive.google.com/file/d/0ByHVzg8bxD6xeDhjVkF1VmV4T2s/view?usp=sharing

ಕನ್ನಡ ಸಂವಾದಿ ಪದಗಳ ಅವಶ್ಯಕತೆ
http://raddiyalladasuddi.blogspot.in/2014/07/blog-post_22.html