Tuesday, November 25, 2014

ಚಿಪ್ಗೇರಿ ವನಸಿರಿ - ನವಂಬರ್ ೧ ಮತ್ತು ೨, ೨೦೧೪

ಚಿಪ್ಗೇರಿ, ಶಿರ್ಸಿಯ ಮೂಲೆಯಲ್ಲಿ ಅವಿತುಕೊಂಡಿರುವ ಒಂದು ಹಳ್ಳಿ. ಹಳ್ಳಿ ಎನ್ನುವುದಕ್ಕಿಂಥ ಕಾಡಿನಲ್ಲೇ ಇರುವ ವಸತಿ ಪ್ರದೇಶ ಎಂದರೆ ಸರಿಯಾಗುತ್ತದೆ ಎನಿಸುತ್ತದೆ. ವಸತಿ ಪ್ರದೇಶ ಎಂದಮೇಲೆ ಜನ ಇದ್ದೇ ಇರಬೇಕು. ಅವರಿಗೆ ಮೂಲಭೂತ ಅಗತ್ಯಗಳಾದ ವಸತಿ, ಆರೋಗ್ಯ, ಶಿಕ್ಷಣ ಎಲ್ಲವೂ ಸಿಗಬೇಕು. ಚಿಪ್ಗೇರಿಯಲ್ಲಿ ಶಾಲೆ ಇರುವುದು ಏಳನೆ ತರಗತಿಯವರೆಗೆ ಮಾತ್ರ. ಪ್ರೌಢಶಾಲೆಗೆ ಕಾತೂರು ಎಂಬ ಊರೇ ಗತಿ. ಈ ರೀತಿಯಿರುವ ಚಿಪ್ಗೇರಿ ಹಾಗೂ ಕಾತೂರಿನಲ್ಲಿ ನಡೆದದ್ದು ವನಸಿರಿ ಎಂಬ ಕಾರ್ಯಕ್ರಮ.

ವನಸಿರಿ ಆಯೋಜನೆಗೊಂಡಿದ್ದು (ಸಿಸ್ಕೋ) ಸಂಭ್ರಮ ಹಾಗೂ ನ್ಯಾಚುರಲಿಸ್ಟ್ ಬೈ ಚಾಯ್ಸ್ (NBC) ಸಹಯೋಗದಲ್ಲಿ. ವನವಾಸಿ ಕಲ್ಯಾಣದ ಸಹಯೋಗದೊಂದಿಗೆ ಸಂಭ್ರಮ ತಂಡ ಚಿಪ್ಗೇರಿ ವಿದ್ಯಾರ್ಥಿನಿಲಯವನ್ನು ಆಯ್ದುಕೊಂಡಿದ್ದು ಕಳೆದ ಎರಡು ವರ್ಷಗಳಿಂದ ಕೆಲವು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಈ ನಿಲಯದಲ್ಲಿ ಸುಮಾರು ೩೦ ವಿದ್ಯಾರ್ಥಿಗಳಿದ್ದು ಬಹುತೇಕರು ಕಾಡಿನಲ್ಲೇ ವಾಸಿಸುವ ಸಿದ್ದಿ ಜನಾಂಗಕ್ಕೆ ಸೇರಿದವರು.
ಕಾತೂರು ಪ್ರೌಢಶಾಲೆ ಮುಂಡಗೋಡ ತಾಲ್ಲೂಕಿನ (ಶಿರ್ಸಿ ಶೈಕ್ಷಣಿಕ ಜಿಲ್ಲೆ) ತುದಿಯಲ್ಲಿರುವ ಶಾಲೆ. ಚಿಪ್ಗೇರಿಗೂ ಈ ಶಾಲೆಗೂ ಸುಮಾರು ೮ ಕಿಲೊಮೀಟರ್ ದೂರ. ವನಸಿರಿ ಕಾರ್ಯಕ್ರಮ ನಡೆದದ್ದು ಈ ಪ್ರೌಢಶಾಲೆಯಲ್ಲಿ.
ಅಕ್ಟೋಬರ್ ೩೧ರ ರಾತ್ರಿ ಹೊರಟು ಚಿಪ್ಗೇರಿ ಸೇರುವಷ್ಟರಲ್ಲಿ ಸ್ವಲ್ಪ ತಡವೇ ಆಗಿತ್ತು. ಆದರೂ ಕಾತೂರನ್ನು ಸುಮಾರು ೧೧ಕ್ಕೆ ತಲುಪುವಷ್ಟರಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮುಗಿಯುವುದರಲ್ಲಿತ್ತು, ವನಸಿರಿ ಕಾರ್ಯಕ್ರಮಕ್ಕೆ ಎಲ್ಲವೂ ಸಿದ್ದಗೊಂಡಿತ್ತು. ವನಸಿರಿ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಿದ್ದು NBC ಗುಂಪು. ಪ್ರೌಢಶಾಲೆಯಲ್ಲಿದ್ದ ಸುಮಾರು ೧೦೦ ವಿದ್ಯಾರ್ಥಿಗಳನ್ನು ಸಾದ್ಯವಾದಷ್ಟೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದ್ದು ಒಂದು ಹೆಗ್ಗಳಿಕೆ.


೧. ರಸಪ್ರಶ್ನೆಃ ಪ್ರೌಢಶಾಲೆಯ ಮೂರೂ ತರಗತಿಗಳಿಂದ ಒಬ್ಬೊಬ್ಬರನ್ನು ಆರಿಸಿ ಗುಂಪುಗಳನ್ನು ಆಯೋಜಿಸಲಾಯಿತು. ಸುಮಾರು ೩೦ ಗುಂಪುಗಳಿಗೆ ರಸಪ್ರಶ್ನೆ ಕಾರ್ಯಕ್ರಮ. ಮೊದಲನೇ ಹಂತದಲ್ಲಿ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆಗೆ ಪ್ರತೀ ಗುಂಪು ಉತ್ತರ ಬರೆದರು. ೩೦ ತಂಡಗಳಲ್ಲಿ ಹೆಚ್ಚು ಅಂಕಗಳಿಸಿದ ಆರು ತಂಡಗಳನ್ನು ಮುಂದಿನ ಹಂತಕ್ಕೆ ಕಳಿಸಲಾಯಿತು. ಎರಡೂ ಹಂತಗಳಲ್ಲಿ ಪ್ರಶ್ನೆಗಳು ಪರಿಸರ/ವನ್ಯಜೀವಿಗಳ ಮೇಲೆ ಇದ್ದು ಯಾವ ರೀತಿಯಂದಲೂ ಪಠ್ಯಕ್ಕೆ ಸಂಬಂಧಿಸಿದ್ದಾಗಿರಲಿಲ್ಲ. ಎರಡೂ ಹಂತಗಳಲ್ಲೂ ಎಲ್ಲಾ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪರಿಸರ ಜ್ನ್ಯಾನ/ಕಾಳಜಿಯನ್ನು ಪ್ರಮಾಣೀಕರಿಸಿದರು. ಎರಡನೆಯ ಹಂತದಲ್ಲಿ ವಿವಿಧ ಸುತ್ತುಗಳಿದ್ದವು. ಪ್ರಾಣಿ ಪಕ್ಷಿಗಳ ಸದ್ದಿನಿಂದ ಅವುಗಳನ್ನು ಗುರುತಿಸುವುದು, ಪಾದದ ಗುರುತಿನಿಂದ ಪ್ರಾಣಿಗಳನ್ನು ಹೆಸರಿಸುವುದು, ಋಣಾತ್ಮಕ ಅಂಕಗಳ ಸುತ್ತು, ತ್ವರಿತ ಉತ್ತರದ ಸುತ್ತು, ಸಾಮಾನ್ಯ ಪ್ರಶ್ನೋತ್ತರದ ಸುತ್ತುಗಳು.. ಪ್ರತೀ ಸುತ್ತು ರೋಚಕತೆಯನ್ನು ಉಳಿಸಿಕೊಂಡಿತ್ತು.


೨. ಜೀವಿ ಸಂಕುಲದ ಪರಿಚಯಃ ರಸಪ್ರಶ್ನೆಯ ಮೊದಲ ಸುತ್ತಿನ ನಂತರ ಜೀವಿ ಸಂಕುಲದ ಪರಿಚಯ ಒಂದು ದೃಶ್ಯಿಕೆ ಮೂಲಕ ಮಾಡಿಕೊಡುವ ಕಾರ್ಯಕ್ರಮ ಇದಾಗಿತ್ತು. ಸೂಕ್ಷ್ಮಜೀವಿಗಳು, ಜಲವಾಸಿಗಳು, ಉಭಯವಾಸಿಗಳು, ಸರೀಸೃಪಗಳು, ಅಕಶೇರುಕಗಳು, ಕಶೇರುಕಗಳು, ಪಕ್ಷಿಗಳು - ಆಯ್ದ ಕೆಲವು ಜೀವಿಗಳ ಚಿತ್ರಗಳು ಹಾಗೂ ವೈಶಿಷ್ಟ್ಯಗಳು ಮುಂತಾದವು. ಕೇವಲ ೪೦ ನಿಮಿಷಗಳಲ್ಲಿ ಎಲ್ಲವನ್ನೂ ಹೇಲಲು ಅಸಾಧ್ಯವಾದರೂ ಜೀವಶಾಸ್ತ್ರದ ಮೂಲ ಪರಿಚಯ ಖಂಡಿತ ಸಾದ್ಯವಾಗಿತ್ತು. 


೩. ಫೋಟೋ ಕಥೆಃ ಜೀವಿ ಸಂಕುಲದ ಪರಿಚಯ - ರಸಪ್ರಶ್ನೆಗಳು ಬೇರೆ ಬೇರೆ ಸಂಪನ್ಮೂಲಗಳಿಂದ ನಿರ್ಮಿತವಾಗಿದ್ದರೆ ಫೋಟೋ ಕಥೆ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯೇ ನಮ್ಮ ಜೊತೆ ಇದ್ದದ್ದ್ದು ವಿಶೇಷ. ಹತ್ತಾರು ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣವನ್ನು ಪ್ರವೃತ್ತಿಯಾಗಿಸಿಕೊಂಡಿರುವ ಮುಖೇಶ್ ಅವರಿಂದ ಈ ಕಾರ್ಯಕ್ರಮ ನಡೆಯಿತು. ಪ್ರತೀ ಚಿತ್ರವೂ ಒಂದು ಕಥೆಯನ್ನು ಹೊಂದಿರುತ್ತದೆ ಎಂಬಂತೆ ಅವರು ಪ್ರದರ್ಶಿಸಿದ ಚಿತ್ರಗಳಿಗೆ ಹಿನ್ನೆಲೆಯನ್ನೂ ಆಸಕ್ತಿದಾಯಕವಾಗಿ ವಿವರಿಸಿದ್ದು ಅದ್ಭುತವಾಗಿತ್ತು.


೪. ಇದ್ದಿಲಿನ ಕಲಾಕೃತಿ ರಚನೆಃ ಕಲಾಕಾರರಾಗಿರುವ ಪ್ರಸಾದ್ ಮಕ್ಕಳ ಎದುರಲ್ಲೇ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಅವನತಿ ಹೊಂದುತ್ತಿರುವ ಪ್ರಭೇದವಾದ ರಣಹದ್ದಿನ ಜಿತ್ರವನ್ನು ಬಿಡಿಸಿದರು. ಡೈಕ್ಲೋಫಿನೈಲ್ ಅಂಶ ಸತ್ತ ದನ ಕರುಗಳ ಮುಖಾಂತರ ರಣಹದ್ದುಗಳ ಸಾವಿಗೂ ಕಾರಣವಾಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ರಣಹದ್ದಿನ ಹಾಗು ದನದ ಚಿತ್ರವನ್ನು ಬಿಡಿಸಿ ಮಕ್ಕಳಲ್ಲಿ ಜಾಗೃತಿಯನ್ನೂ ಮೂಡಿಸಿದರು. ಕಾರ್ಯಕ್ರಮದ ನೆನಪಿಗೆ ಈ ಕಲಾಕೃತಿಯನ್ನು ಶಾಲೆಗೆ ನೀಡಲಾಯಿತು.

ಕಾರ್ಯಕ್ರಮದ ಕಡೆಯಲ್ಲಿ ರಸಪ್ರಶ್ನೆ ವಿಜೇತರಿಗೆ ಬಹುಮಾನವನ್ನೂ, ಶಾಲೆಗೆ ಸ್ಮರಣಿಕೆಯನ್ನೂ ನೀಡಲಾಯಿತು.

ಕನ್ನಡ ರಾಜ್ಯೋತ್ಸವ ದಿನದ ವನಸಿರಿ ಕಾರ್ಯಕ್ರಮ ಬಹುಕಾಲ ನೆನಪಿನಲ್ಲುಳಿಯಲು ಇನ್ನೊಂದು ಕಾರಣವು ಇದೆ. ಈ ಕಾರ್ಯಕ್ರಮಕ್ಕೆ ಒಬ್ಬ ಶಿಕ್ಷಕರು ಬಂದಿದ್ದರು; ಕಾತೂರು ಮತ್ತು ಚಿಪ್ಗೇರಿ ನಡುವಿನ ಹಳ್ಳಿಯಾದ ದೊಡ್ಡಹಾರವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯರು. ಬದಲಾವಣೆ ಎಲ್ಲರೂ ಬಯಸುತ್ತಾರೆ; ಬದಲಾವಣೆಗಾಗಿ ತಾವೂ ಬದಲಾಗಬೇಕು ನಂತರ ಬೇರೆಯವರನ್ನು ಬದಲಿಸಲು ಸಾಧ್ಯ ಎನ್ನುವುದನ್ನು ಎಲ್ಲರೂ ಮರೆಯುತ್ತಾರೆ (ಮರೆಯುತ್ತೇವೆ). ಗಾಂಧೀಜಿಯವರ "Be the change" ಕರೆ ಸಹ ಇದೇ. ಈ ಶಿಕ್ಷಕರೊಂದಿಗೆ ಮಾತನಾಡಿದ ಮೇಲೆ ಅವರ ಶಾಲೆಯನ್ನು ಸಂದರ್ಶಿಸಿದೆವು.  ಒಬ್ಬ ಶಿಕ್ಷಕರೇ ಒಂದರಿಂದ ಐದನೇ ತರಗತಿಗೆ ಪಾಠ ಮಾಡುತ್ತಾ ಶಾಲೆಯ ಪರಿಸರವನ್ನೂ ಬದಲಿಸಿದ್ದಾರೆ. ಕಳೆದ ಎರಡು ದಶಕಗಳಿಂದಲೂ ಒಂದೇ ಶಾಲೆ, ಒಂದೇ ಹಳ್ಳಿ. ಶಾಲೆಯ ಒಳಹೊಕ್ಕರೆ ಕಾಣುತ್ತಿದ್ದುದು ಪಠ್ಯಕ್ಕೆ ಸಂಬಂಧಿಸಿದ ಚಿತ್ರಪಟಗಳು, ವಿಶಾಲವಾದ ಹೊರಾಂಗಣದಲ್ಲಿ ಹಲವು ರೀತಿಯ ಗಿಡಮರಗಳ ಕೈತೋಟ, "ಸ್ವಚ್ಚ ಭಾರತ"  ಕರೆಗೆ ಮುಂಚಿತವಾಗಿಯೆ ನಿರ್ಮಾಣವಾದ ಶೌಚಾಲಯ, ಶಾಲೆಗೆ ಬೇಕಾದ ನೀರಿಗಾಗಿ ಒಂದು ಕೈಪಂಪು. ಶಿಕ್ಷಕರನ್ನು ಮನೆಯವರಂತೆಯೇ ಹಳ್ಳಿಯ ಜನ ಕಾಣುತ್ತಾರೆ, ಇದಕ್ಕಿಂಥ ಇನ್ನೇನು ಬೇಕು? ಈ ಶಿಕ್ಷಕರನ್ನು ಸರ್ಕಾರವೂ ಗುರುತಿಸಿರುವುದು ಒಂದು ಸಮಾಧಾನ. ಕೆಲವರಾದರು ಇವರಿಂದ ಪ್ರಭಾವಿತರಾದರೆ ಅಚ್ಚರಿಯಿಲ್ಲ.

ವನಸಿರಿ ಕಾರ್ಯಕ್ರಮ ಮುಗಿದ ನಂತರ ಚಿಪ್ಗೇರಿಗೆ ಬಂದಮೇಲೆ ಚಿಪ್ಗೇರಿ ಹಳ್ಳಿಯಲ್ಲಿ ಒಂದು ಸುತ್ತು ಹಾಕಿದೆವು. ನಂತರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳೊಂದಿಗೆ ಪರಿಚಯ ಹಾಗೂ ಅನೌಪಚಾರಿಕ ಮಾತು-ಕಥೆ. ದೇಶದಲ್ಲಿ ಹುಲಿ ಸಂತತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿಯೇ ಹುಲಿಯ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ನಂತರ ಊಟ ನಿದ್ದೆ. ಕೆಲವರು ಆ ರಾತ್ರಿ ಸಮಯದಲ್ಲೂ ಪ್ರಾಣಿ ವೀಕ್ಷಣೆ ಮಾಡಿಬಂದರು.

ಮರುದಿನ ಬೆಳಿಗ್ಗೆ ಚಿಪ್ಗೇರಿ ವಿದ್ಯಾರ್ಥಿಗಳೊಂದಿಗೆ ಪಕ್ಷಿವೀಕ್ಷಣೆ ಪ್ರಾರಂಭಿಸಿದೆವು. ಕಾಡಿನ ಪರಿಸರದಲ್ಲಿಯೇ ಚಿಪ್ಗೇರಿ ಇರುವುದರಿಂದ ಹೆಚ್ಚು ದೂರ ಹೋಗಬೇಕಿರಲಿಲ್ಲ. ನವಿಲು, ಮಂಗಟ್ಟೆಗಳು (horn bill), ಕೊಕ್ಕರೆ ಬಾತುಕೋಳಿಗಳು, ಮುಂತಾದ ಹಲವು ಪಕ್ಷಿಗಳು ಕಂಡುಬಂದವು. ಪಕ್ಷಿಗಳನ್ನು ನೋಡಲು ಬೈನಾಕ್ಯುಲರ್ ಬಳಸುವುದನ್ನು ತೋರಿಸಿ ಪ್ರಸಿದ್ಧ ಪುಸ್ತಕಗಳ ಸಹಾಯದಿಂದ ಪಕ್ಷಿಗಳನ್ನು ಗುರುತಿಸಿ ಹೇಳಿದರೆ, ಕಂಡ ಪ್ರತೀ ಪಕ್ಷಿಗೂ ಅಲ್ಲಿನ ಜನ ಕರೆಯುವ ಒಂದು ಹೆಸರನ್ನೂ ವಿದ್ಯಾರ್ಥಿಗಳು ಹೇಳಿ ನಮ್ಮನ್ನು ಅಚ್ಚರಿಗೊಳಿಸಿದರು. 

ಹೀಗಿತ್ತು ನಮ್ಮ ತಂಡ - ಕಾತೂರು ವಿದ್ಯಾರ್ಥಿ ಹಾಗೂ ಶಿಕ್ಷಕರೊಂದಿಗೆ ಸಂಭ್ರಮ ಮತ್ತು NBC ಸ್ವಯಂಸೇವಕರು.